ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಸಾಕಷ್ಟು ಜನರು ತಮ್ಮೂರಿನತ್ತ ತೆರಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ವಿಪರೀತ ಸಂಚಾರ ದಟ್ಟಣೆ ಕಂಡುಬಂತು.
ನೆಲಮಂಗಲ ಟೋಲ್‌ಗೇಟ್‌ನಲ್ಲಿ ಮನೆ ಸಾಮಗ್ರಿ ಹಾಗೂ ಪೀಠೋಪಕರಣ ಹೊತ್ತ ವಾಹನಗಳೇ ಹೆಚ್ಚಿದ್ದವು. ಖಾಸಗಿ ವಾಹನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದರು.
ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ನಗರದಲ್ಲಿ ವಾಣಿಜ್ಯ ಚಟುವಟಿಕೆ ಪುನಃ ಆರಂಭವಾಗಿದೆ. ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ ಅಥವಾ ಶನಿವಾರ ರಾತ್ರಿ ಜನ ಊರಿಗೆ ಹೋಗುವುದು ಹಾಗೂ ಸೋಮವಾರ ಬೆಳಿಗ್ಗೆ ವಾಪಸು ಬರುವುದು ಸಾಮಾನ್ಯವಾಗಿತ್ತು. ಆದರೆ, ಭಾನುವಾರವೂ ಜನ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿದ್ದು ಕಂಡುಬಂತು.
ಯಶವಂತಪುರ, ಪೀಣ್ಯ, ಜಾಲಹಳ್ಳಿ, ನೆಲಮಂಗಲ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲೂ ವಾಹನಗಳ ಸಂಖ್ಯೆ ಹೆಚ್ಚಿತ್ತು. ಬೈಕ್, ಕಾರು ಸೇರಿದಂತೆ ಹಲವು ವಾಹನಗಳು ನಿಧಾನವಾಗಿ ಚಲಿಸಿದ್ದರಿಂದ ದಟ್ಟಣೆಯೂ ಉಂಟಾಯಿತು.
‘ಬೇರೆ ದಿನಗಳಲ್ಲಿ ದಟ್ಟಣೆ ಸಾಮಾನ್ಯ. ಭಾನುವಾರವೂ ವಾಹನಗಳ ದಟ್ಟಣೆ ಕಂಡುಬಂದಿದ್ದು ಇದೇ ಮೊದಲು’ ಎಂದು ನವಯುಗ ಟೋಲ್‌ಗೇಟ್ ಸಿಬ್ಬಂದಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.