ಬೆಂಗಳೂರು: ಕೋವಿಡ್–19 ಪ್ರಕರಣ ಗಳು ಹೆಚ್ಚುತ್ತಿರುವುದರಿಂದ ನಗರದ ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಮತ್ತೆ ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ.
ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗಳು ಪೋಷಕರಿಗೆ ನೋಟಿಸ್ ಜಾರಿ ಗೊಳಿಸಿದ್ದು, ಡಿ. 1ರಿಂದ ಆಫ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿವೆ.
ಆಫ್‌ಲೈನ್ ತರಗತಿಗಳನ್ನು ರದ್ದುಪಡಿಸುವಂತೆ ಹಲವು ಪೋಷಕರು ಸಹ ಒತ್ತಾಯಿಸಿದ್ದಾರೆ ಎಂದು ಶಿಕ್ಷಕರು ತಿಳಿಸಿದ್ದಾರೆ.
‘ಆಫ್‌ಲೈನ್ ತರಗತಿಗಳನ್ನು ರದ್ದುಪಡಿಸುವಂತೆ ಹಲವು ಪೋಷಕರು ಮನವಿ ಮಾಡುತ್ತಿದ್ದಾರೆ. ಸದ್ಯ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದೇವೆ. ಹೀಗಾಗಿ, ಆಫ್‌ಲೈನ್ ತರಗತಿಗಳನ್ನು ರದ್ದುಪಡಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಆಫ್‌ಲೈನ್‌ಗೆ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕಡಿಮೆಯಾದರೆ ಆನ್‌ಲೈನ್ ಮೂಲಕ ಮಾತ್ರ ತರಗತಿಗಳನ್ನು ನಡೆಸಲಾಗುವುದು’ ಎಂದು ಬೆಂಗಳೂರು ಉತ್ತರದಲ್ಲಿನ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.
‘ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲ. ಹೀಗಾಗಿ, ನಾವು ಇನ್ನೂ ಭೌತಿಕ ತರಗತಿಗಳನ್ನು ಆರಂಭಿಸಿಲ್ಲ. ಜನವರಿ ಮೊದಲ ವಾರದಲ್ಲಿ ಶಾಲೆ ತೆರೆಯಲು ಉದ್ದೇಶಿಸಿದ್ದೇವೆ’ ಎಂದು ದೆಹಲಿ ಪಬ್ಲಿಕ್ ಸ್ಕೂಲ್ ಪೂರ್ವದ ಪ್ರಾಂಶುಪಾಲರಾದ ಮನಿಲಾ ಕರ್ವಾಲ್ಹೊ ತಿಳಿಸಿದ್ದಾರೆ.
‘ಹವಾಮಾನ ವೈಪರೀತ್ಯ ಸಮಸ್ಯೆ ಯಾಗಿದೆ. ಹೊಸ ತಳಿ ಪತ್ತೆ ಮತ್ತು ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವು ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಹಲವು ಪೋಷಕರು ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಮನವಿ ಮಾಡುತ್ತಿದ್ದಾರೆ’ ಎಂದು ನಾಗರಬಾವಿಯ ಆಕ್ಸ್‌ಫರ್ಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಪ್ರಾಂಶುಪಾಲ ಸುಪ್ರೀತ್ ಬಿ.ಆರ್. ತಿಳಿಸಿದ್ದಾರೆ.
‘ರಕ್ಷಣಾ ನಿಯಮ ರೂಪಿಸಿ’
ಬೆಂಗಳೂರು: ‘ಮಕ್ಕಳ ಹಿತಾಸಕ್ತಿ ದೃಷ್ಟಿಯಿಂದ ಆನ್‌ಲೈನ್ ತರಗತಿಗಳ ಬಗ್ಗೆ ರಕ್ಷಣಾ ನಿಯಮಗಳನ್ನು ರೂಪಿಸುವುದು ಅಗತ್ಯ’ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ಪ್ರತಿಪಾದಿಸಿದೆ.
‘ಶಾಲೆಗಳು ಆರಂಭವಾಗಿ ಆನ್‌ಲೈನ್ ತರಗತಿಗಳು ಸ್ಥಗಿತಗೊಳ್ಳಬಹುದು ಎಂದು ಹಲವು ಪೋಷಕರು ಯೋಚಿಸಿದ್ದರು. ಆದರೆ, ಕೊರೊನಾ ಭೀತಿ ಯಿಂದಾಗಿ ಇನ್ನೂ ಹಲವು ಶಾಲೆಗಳು ತೆರೆದಿಲ್ಲ. ಆನ್‌ಲೈನ್ ತರಗತಿಗಳನ್ನು ಮುಂದುವರಿಸಿವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಇನ್ನೂ ಹಲವು ದಿನಗಳ ಕಾಲ ಆನ್‌ಲೈನ್ ತರಗತಿಗಳು ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ, ರಕ್ಷಣಾ ನಿಯಮಗಳನ್ನು ರೂಪಿಸುವುದು ಅತ್ಯಗತ್ಯ’ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ನಾಗಸಿಂಹ ಜಿ. ರಾವ್ ತಿಳಿಸಿದ್ದಾರೆ.
‘ಶಿಕ್ಷಣ ಸಂಸ್ಥೆಗಳಿಗಾಗಿ ಮಕ್ಕಳ ರಕ್ಷಣಾ ನಿಯಮಗಳನ್ನು 2016ರಲ್ಲೇ ಸರ್ಕಾರ ಸಿದ್ಧಪಡಿಸಿದೆ. ಆದರೆ, ಇನ್ನೂ ಅನೇಕ ಖಾಸಗಿ ಶಾಲೆಗಳು, ಸರ್ಕಾರಿ ಶಾಲೆಗಳು ಮಕ್ಕಳ ರಕ್ಷಣಾ ನಿಯಮಗಳನ್ನು ಅಳವಡಿಸಿಕೊಂಡಿಲ್ಲ. ರಾಜ್ಯದ ಪ್ರತಿಯೊಂದು ಶಾಲೆಗಳು ಮಕ್ಕಳ ರಕ್ಷಣಾ ನಿಯಮಗಳನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಕೆಲ ಶಿಫಾರಸುಗಳು
* ಆನ್‌ಲೈನ್ ತರಗತಿಯ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುವುದು ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಶಿಕ್ಷಕರಿಗೆ ತರಬೇತಿ ನೀಡಬೇಕು.
* ಯಾವ ಲಿಂಕ್ ತೆರೆಯಬಹುದು. ಯಾವುದು ತೆರೆದರೆ ತೊಂದರೆ ಎನ್ನುವ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು.
* ತೊಂದರೆ ಅನುಭವಿಸಿದ ಶಾಲೆಗಳಲ್ಲಿ ಆನ್‌ಲೈನ್ ತರಗತಿ ನಡೆಯುವಾಗ ಸೈಬರ್ ಪೊಲೀಸರು ಹಾಜರಿದ್ದು, ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.