ಬೆಂಗಳೂರು: ರಾಜ್ಯ ಸರ್ಕಾರ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಮುಂದುವರಿಸಿದ್ದರೂ, ಮುಂದಿನ ವಾರದ ಅಂತ್ಯದ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಇದೆ ಎಂದು ಕೋವಿಡ್ ವಾರ್ ರೂಂ ಅಂದಾಜು ಮಾಡಿದೆ.
ವಾರ್ ರೂಂ ಸಿದ್ಧಪಡಿಸಿರುವ ಅಂದಾಜು ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಮೇ 6ರ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆ 1,086ಕ್ಕೆ ಹೆಚ್ಚಬಹುದು. ಇದು ಈಗಿನ ಸಂಖ್ಯೆಗಿಂತ (535) ದುಪ್ಪಟ್ಟು. ಇದೇ 25ರವೆಗೆ ಕೋವಿಡ್‌ನ ಪ್ರಗತಿ ದರವನ್ನು ಸರಾಸರಿ ಲೆಕ್ಕ ಹಾಕಿ ಈ ಅಂದಾಜು ಮಾಡಲಾಗಿದೆ.
ಬೆಂಗಳೂರಿನಲ್ಲಿ ಮೇ 6ರ ವೇಳೆಗೆ ಪ್ರಕರಣಗಳ ಸಂಖ್ಯೆ 287ಕ್ಕೆ ಹೆಚ್ಚಬಹುದು. ಮೈಸೂರಿನಲ್ಲಿ 142, ಕಲಬುರ್ಗಿಯಲ್ಲಿ 97 ಪ್ರಕರಣಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ‘ಇದೊಂದು ಅಂದಾಜು ಮಾತ್ರ,ಸಂದರ್ಭಕ್ಕೆ ತಕ್ಕಂತೆ ಇದು ಬದಲಾಗಬಹುದು. ಇದಕ್ಕೊಂದು ನಿರ್ದಿಷ್ಟ ಮಾನದಂಡ ಇಲ್ಲ. ನಗರದ ಪಾದರಾಯನಪುರ ಪ್ರಕರಣ ಇಡೀ ಚಿತ್ರಣವನ್ನೇ ಬದಲಿಸಿತ್ತಲ್ಲ. ಅದು ಬಹಳ ಅನರೀಕ್ಷಿತವಾಗಿತ್ತು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
‘ಕೋವಿಡ್–19 ಪ್ರಕರಣವನ್ನು 700ರ ಗಡಿ ದಾಟದಂತೆ ಮಾಡಬೇಕು ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದರೂ 1,086ರ ಸಂಖ್ಯೆ ತಲುಪದೆ ಇರಲಿ ಎಂಬುದೇ ನಮ್ಮ ಈಗಿನ ಆಶಯ’ ಎಂದು ಅವರು ಹೇಳಿದರು.
ಪರೀಕ್ಷೆ ಹೆಚ್ಚಳ: ‘ರಾಜ್ಯದಲ್ಲಿ ಪರೀಕ್ಷೆ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಇದೇ 14ರವರೆಗೆ ಇಲ್ಲಿ ನಡೆಯುತ್ತಿದ್ದುದು ದಿನಕ್ಕೆ 500ರಷ್ಟು ಪರೀಕ್ಷೆ. ಮಂಗಳವಾರ ಒಂದೇ ದಿನ 4,700 ಪರೀಕ್ಷೆ ನಡೆದಿದೆ. ಇದುವರೆಗೆ 50 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ಪ್ರಯೋಗಾಲಯಗಳ ನೋಡಲ್ ಅಧಿಕಾರಿ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
‘ಸದ್ಯ 24 ಪ್ರಯೋಗಾಲಯಗಳಿವೆ, ಮುಂದಿನ ವಾರ ಇನ್ನೂ 5 ಪ್ರಯೋಗಾಲಯಗಳು ಆರಂಭವಾಗಲಿವೆ, ಮೂಲಸೌಲಭ್ಯದ ಬಗ್ಗೆ ಗಮನಿಸಿದರೆ ರಾಜ್ಯದಲ್ಲಿ ಗಾಬರಿಗೊಳ್ಳುವಂತಹ ಪರಿಸ್ಥಿತಿ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.