ADVERTISEMENT

ದೇಶವು ಪರಿಸರ ವಿಪತ್ತಿನ ಸನಿಹದಲ್ಲಿದೆ: ಇತಿಹಾಸಕಾರ ರಾಮಚಂದ್ರ ಗುಹಾ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 15:38 IST
Last Updated 21 ಜನವರಿ 2024, 15:38 IST
<div class="paragraphs"><p>ಬೆಂಗಳೂರಿನ ಗಾಂಧಿ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಅನಿಲ್‌ ಹೆಗ್ಡೆ ಅವರು ‘ಬಾಪು ಕೆ ಲೋಗ್‌’ ಸಂಘಟನೆಯ ಪ್ರಣಾಳಿಕೆ ಬಿಡುಗಡೆ ಮಾಡಿದರು.  </p></div>

ಬೆಂಗಳೂರಿನ ಗಾಂಧಿ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಅನಿಲ್‌ ಹೆಗ್ಡೆ ಅವರು ‘ಬಾಪು ಕೆ ಲೋಗ್‌’ ಸಂಘಟನೆಯ ಪ್ರಣಾಳಿಕೆ ಬಿಡುಗಡೆ ಮಾಡಿದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಕೈಗಾರೀಕರಣದ ದುಷ್ಪರಿಣಾಮಗಳಿಂದಾಗಿ ದೇಶವು ಪರಿಸರ ವಿಪತ್ತಿನ ಸನಿಹದಲ್ಲಿದೆ. ಪರಿಸರಕ್ಕೆ ಸಂಬಂಧಿಸಿದ ಬಹು ಆಯಾಮದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದರು.

ADVERTISEMENT

ಹವಾಮಾನ ಬದಲಾವಣೆ ವಿರುದ್ಧ ಕೆಲಸ ಮಾಡುತ್ತಿರುವ ‘ಬಾಪು ಕೆ ಲೋಗ್‌’ ಸಂಘಟನೆಯು ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಆರ್ಥಿಕ ಬೆಳವಣಿಗೆಯ ಹಾದಿಯ ಕುರಿತು ಮರುಚಿಂತನೆ ಮಾಡದಿದ್ದರೆ ಅಪಾಯವಿದೆ’ ಎಂದರು.

‘ಜಗತ್ತಿನ ಅತಿಹೆಚ್ಚು ವಾಯುಮಾಲಿನ್ಯ ಹೊಂದಿರುವ 20 ನಗರಗಳು ಭಾರತದಲ್ಲಿವೆ. ವಾಯು ಮಾಲಿನ್ಯದಲ್ಲಿ ಭಾರತವು ವಿಶ್ವಗುರು ಆಗುವ ಹಂತ ತಲುಪಿದೆ. ನಮ್ಮ ನದಿಗಳು ಜೈವಿಕವಾಗಿ ಸತ್ತು ಹೋಗಿವೆ. ಜೈವಿಕ ವೈವಿಧ್ಯವೂ ಅಪಾಯಕ್ಕೆ ಸಿಲುಕಿದೆ’ ಎಂದು ಹೇಳಿದರು.

ದೇಶವು ಈಗ ಶುದ್ಧ ಗಾಳಿ, ಶುದ್ಧ ನೀರು, ಉತ್ತಮ ಶಿಕ್ಷಣ, ಆರೋಗ್ಯ ಸೇರಿದಂತೆ ಜೀವನಮಟ್ಟ ಸುಧಾರಣೆಗೆ ಪೂರಕವಾದ ವಿಷಯಗಳ ಕುರಿತು ಯೋಚಿಸಬೇಕು. ಅದಕ್ಕಾಗಿ ಮಹಾತ್ಮ ಗಾಂಧಿ ಪ್ರಣೀತ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಒತ್ತು ನೀಡಬೇಕು ಎಂದರು.

ಸತ್ಯ ಒಪ್ಪಲು ಸಿದ್ಧರಿಸಿಲ್ಲ: ರಂಗಕರ್ಮಿ, ಬಾಪು ಕೆ ಲೋಗ್‌ ಪ್ರಣಾಳಿಕೆಯ ಲೇಖಕ ಪ್ರಸನ್ನ ಮಾತನಾಡಿ, ‘ದೇಶವು ದುರಿತ ಕಾಲದಲ್ಲಿದೆ. ಈಗ ಎಲ್ಲರ ಕೊರಳಿನಲ್ಲೂ ಸಿಂಥೆಟಿಕ್‌ ಕೇಸರಿ ವಸ್ತ್ರ ಕಾಣಿಸುತ್ತಿದೆ. ಆದರೆ, ಕೈಮಗ್ಗದಲ್ಲಿ ನೇಯ್ದು, ಮಣ್ಣಿನಲ್ಲಿ ಅದ್ದಿದ ಪವಿತ್ರ ವಸ್ತ್ರವನ್ನು ಗುರುತಿಸಿ, ಗೌರವಿಸುವ ಸ್ಥಿತಿಯಲ್ಲಿ ಭಕ್ತರು ಉಳಿದಿಲ್ಲ’ ಎಂದು ಹೇಳಿದರು.

ಕೈಮಗ್ಗ ಉದ್ಯಮದ ರಕ್ಷಣೆಯಿಂದಲೇ ಸುಸ್ಥಿರ ಸಮಾಜದ ನಿರ್ಮಾಣ ಆರಂಭವಾಗಬೇಕು. ಸಿಂಥೆಟಿಕ್‌ ವಸ್ತ್ರ ಉತ್ಪಾದನೆಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಆದರೆ, ಕಾನೂನು ಮತ್ತು ಸಂವಿಧಾನವನ್ನು ಗಾಳಿಗೆ ತೂರಿ ಪವಿತ್ರ ವಸ್ತ್ರಕ್ಕೆ ಮಾನ್ಯತೆ ನಿರಾಕರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್ಥಿಕ ತಜ್ಞ ವಿನೋದ್‌ ವ್ಯಾಸುಲು ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಅನಿಲ್‌ ಹೆಗ್ಡೆ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಪ್ರಣಾಳಿಕೆಯಲ್ಲಿ ಏನಿದೆ?

ಸರಕು ಮತ್ತು ಸೇವಾ ಕ್ಷೇತ್ರಗಳಲ್ಲಿ ಶೇಕಡ 70ರಷ್ಟು ಕೆಲಸಗಳಿಗೆ ಕಾರ್ಮಿಕರ ಬಳಕೆ ಹವಾಮಾನ ಬದಲಾವಣೆ ವಿರುದ್ಧ ಸಂಘಟಿತ ಪ್ರಯತ್ನ ಧರ್ಮ ಕೇಂದ್ರಿತ ರಾಜಕಾರಣವನ್ನು ತಿರಸ್ಕರಿಸುವುದು ಸೇರಿದಂತೆ ಹಲವು ಅಂಶಗಳು ‘ಬಾಪು ಕೆ ಲೋಗ್‌’ ಪ್ರಣಾಳಿಕೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.