ಬೆಂಗಳೂರು: ಕೊರೊನಾ ವೈರಸ್‌ನ ಮೂರನೇ ಅಲೆಯಲ್ಲಿ ಚಿಕ್ಕ ಮಕ್ಕಳಲ್ಲಿ ವ್ಯಾಪಕವಾಗಿ ಸೋಂಕು ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ, ಶಿಶುರೋಗ ತಜ್ಞರ ಪ್ರಕಾರ ಎರಡನೇ ಅಲೆಯಲ್ಲೇ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ.
‘ಎರಡನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗಲುತ್ತಿರುವ ಪ್ರಮಾಣ ಶೇಕಡ 10ರಿಂದ 20ರಷ್ಟಿದೆ. ಮೊದಲನೇ ಅಲೆಗೆ ಹೋಲಿಸಿದರೆ ಶೇ 4ರಷ್ಟು ಹೆಚ್ಚಳ ಕಂಡುಬಂದಿದೆ’ ಎನ್ನುತ್ತಾರೆ ವೈರಾಣು ತಜ್ಞ ಡಾ.ವಿ. ರವಿ.
ರಾಜ್ಯ ಮಟ್ಟದ ಕೋವಿಡ್ ವಾರ್ ರೂಮ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, 2020ರ ಮಾರ್ಚ್ 9ರಿಂದ ಸೆಪ್ಟೆಂಬರ್ 25ರವರೆಗೆ ಕೋವಿಡ್ ಮೊದಲ ಅಲೆ ಗರಿಷ್ಠ ಮಟ್ಟ ತಲುಪಿದ್ದ ಅವಧಿಯಲ್ಲಿ ಹತ್ತು ವರ್ಷದೊಳಗಿನ 19,378 ಮಕ್ಕಳಿಗೆ ಸೋಂಕು ತಗುಲಿತ್ತು. ಇದೇ ಅವಧಿಯಲ್ಲಿ 11ರಿಂದ 20 ವರ್ಷ ವಯಸ್ಸಿನ 41,895 ಮಂದಿಯಲ್ಲಿ ಕೋವಿಡ್ ದೃಢಪಟ್ಟಿತ್ತು.
ಎರಡನೇ ಅಲೆಯಲ್ಲಿ ಪ್ರಸಕ್ತ ವರ್ಷದ ಮಾರ್ಚ್ 1ರಿಂದ ಮೇ 16ರವರೆಗಿನ ಅವಧಿಯಲ್ಲಿ ಬೆಂಗಳೂರು ನಗರವೊಂದರಲ್ಲೇ ಹತ್ತು ವರ್ಷದೊಳಗಿನ 19,401 ಮಕ್ಕಳು ಸೋಂಕಿತರಾಗಿದ್ದಾರೆ ಎಂಬ ಮಾಹಿತಿ ಬಿಬಿಎಂಪಿಯಿಂದ ಲಭಿಸಿದೆ. ಆದರೆ, ರಾಜ್ಯದಲ್ಲಿ ಸೋಂಕಿತರಾದ ಮಕ್ಕಳ ಸಂಖ್ಯೆಯನ್ನು ಹಂಚಿಕೊಳ್ಳಲು ರಾಜ್ಯಮಟ್ಟದ ಕೋವಿಡ್ ವಾರ್ ರೂಮ್ ನಿರಾಕರಿಸಿದೆ.
‘ವಯಸ್ಕರ ಬೇಜವಾಬ್ದಾರಿತನದ ನಡವಳಿಕೆಯಿಂದಾಗಿಯೇ ಈ ಬಾರಿ ಮಕ್ಕಳಲ್ಲಿ ಸೋಂಕು ಹೆಚ್ಚಿದೆ’ ಎನ್ನುತ್ತಾರೆ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮಾಜಿ ನಿರ್ದೇಶಕಿ ಡಾ.ಆಶಾ ಬೆನಕಪ್ಪ.
‘ಆಹಾರ ಕ್ರಮದಲ್ಲಿ ಬದಲಾವಣೆ, ಸಾಮಾನ್ಯ ವೈರಾಣು ಸೋಂಕಿನಿಂದ ತಪ್ಪಿಸಿಕೊಂಡಿರುವುದು ಕೂಡ ಈಗ ಸೋಂಕು ಹೆಚ್ಚಳವಾಗಲು ಕಾರಣ ಇರಬಹುದು. ದೈಹಿಕ ಚಟುವಟಿಕೆಗಳು ಕಡಿಮೆಯಾಗಿರುವುದ
ರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗಿರುತ್ತದೆ’ ಎಂದು ಅವರು ಹೇಳಿದರು.
ಕೋವಿಡ್ ತಗುಲಿರುವ ಮಕ್ಕಳಲ್ಲಿ ಶೇ 3ರಿಂದ 5ರಷ್ಟು ಮಕ್ಕಳಲ್ಲಿ ಕರುಳುಗಳ ಉರಿಯೂತ ಮತ್ತು ಗುಳ್ಳೆಗಳು ಸೇರಿದಂತೆ ಚರ್ಮರೋಗ ಸಮಸ್ಯೆಗಳೂ ಕಾಣಿಸಿಕೊಂಡಿರುವುದನ್ನು ಮಕ್ಕಳ ತಜ್ಞರು ಗುರುತಿಸಿದ್ದಾರೆ. ಇದು ರೂಪಾಂತರ ಹೊಂದಿರುವ ಕೊರೊನಾ ವೈರಸ್‌ನ ಪರಿಣಾಮ ಇರಬಹುದು ಎಂದು ಅವರು ಅಂದಾಜಿಸುತ್ತಾರೆ.
18 ಮಕ್ಕಳ ಸಾವು: ಮೊದಲ ಅಲೆಯಲ್ಲಿ 22 ಮಕ್ಕಳ ಸಾವು ಸಂಭವಿಸಿತ್ತು. ಎರಡನೇ ಅಲೆಯಲ್ಲಿ ಇದುವರೆಗೆ 18 ಮಕ್ಕಳು ಕೋವಿಡ್‌ನಿಂದ ಮೃತಪಟ್ಟಿರುವುದು ದಾಖಲಾಗಿದೆ.
ಮೈಸೂರಿನಲ್ಲಿ ಏಳು ತಿಂಗಳ ಗಂಡು ಮಗು ಅನಾರೋಗ್ಯಕ್ಕೊಳಗಾಗಿತ್ತು. ಮೇ 15ರಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಅತಿಯಾದ ಜ್ವರ, ಕೆಮ್ಮು, ಎದೆ ಹಾಲು ಕುಡಿಯಲು ಸಾಧ್ಯವಾಗದಂತಹ ಸಮಸ್ಯೆಗಳಿಂದ ಬಳಲುತ್ತಿತ್ತು. ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ನಡೆಸಿದಾಗ ಕೋವಿಡ್ ದೃಢಪಟ್ಟಿತ್ತು ಎಂದು ಮಗುವನ್ನು ಕರೆತಂದಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರವೀಂದ್ರ ಸಿ. ವಿವರಿಸಿದರು.
‘ತಕ್ಷಣವೇ ಮಗುವನ್ನು ‘ಶಿಶೂ’ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು. ಮೂರು ದಿನಗಳೊಳಗೆ ಮಗು ಗುಣಮುಖವಾಯಿತು’ ಎಂದು ಅಲ್ಲಿನ ಶಿಶುರೋಗ ತಜ್ಞ ಡಾ. ಅನೂಪ್ ಎಸ್. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.