ADVERTISEMENT

ಕೋವಿಡ್ ಚಿಕಿತ್ಸೆ: ‘ಖಾಸಗಿ’ ಆಸ್ಪತ್ರೆ ವಸೂಲಿ

ಆರೋಗ್ಯ ಇಲಾಖೆಯಿಂದ 577 ಆಸ್ಪತ್ರೆಗಳಿಗೆ ನೋಟಿಸ್ ಜಾರಿ lರೋಗಿಗಳ ಕುಟುಂಬಸ್ಥರಿಗೆ ₹ 1.58 ಕೋಟಿ ಪಾವತಿ

ವರುಣ ಹೆಗಡೆ
Published 18 ಆಗಸ್ಟ್ 2022, 22:03 IST
Last Updated 18 ಆಗಸ್ಟ್ 2022, 22:03 IST
.
.   

ಬೆಂಗಳೂರು: ಕೋವಿಡ್‌ಗೆ ಚಿಕಿತ್ಸೆ ನೀಡಲು ಕೆಲವು ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಹಣ ಪಡೆಯುವ ಜತೆಗೆ ರೋಗಿಗಳ ಕಡೆಯವರಿಂದಲೂ ಚಿಕಿತ್ಸಾ ವೆಚ್ಚವನ್ನು ವಸೂಲಿ ಮಾಡಿವೆ. ರೋಗಿಗಳ ಕುಟುಂಬಸ್ಥರು ಆರೋಗ್ಯ ಇಲಾಖೆಗೆ ನೀಡಿರುವ ದೂರುಗಳ ಪ್ರಕಾರ ಒಟ್ಟು ₹ 18.87 ಕೋಟಿಯಷ್ಟು ಹಣವನ್ನು ಆಸ್ಪತ್ರೆಗಳು ಹೆಚ್ಚುವರಿಯಾಗಿ ಪಡೆದಿವೆ.

ಹಣ ವಸೂಲಿಗೆ ಸಂಬಂಧಿಸಿದಂತೆ ಇಲಾಖೆಯು ಈವರೆಗೆ 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿ, 403 ರೋಗಿಗಳ ಕುಟುಂಬಗಳಿಗೆ ₹ 1.58 ಕೋಟಿ ಹಣವನ್ನು ಹಿಂದಿರುಗಿಸಿದೆ. ರೋಗಿಗಳಿಂದ ಹಣ ವಸೂಲಿ ಮಾಡಿದ ಆಸ್ಪತ್ರೆಗಳ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಬೆಂಗಳೂರಿನ ಬಹುತೇಕ ಆಸ್ಪತ್ರೆಗಳು ಹೆಚ್ಚುವರಿಯಾಗಿ ಹಣ ಪಡೆದಿವೆ. ಹಣ ವಸೂಲಿಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಸತ್ಯಾಸತ್ಯತೆ ಪರಿಶೀಲನೆಗೆ ಜಿಲ್ಲಾ ಮಟ್ಟದ ಕುಂದು ಕೊರತೆ ಕಮಿಟಿಗೆ (ಡಿಜಿಆರ್‌ಸಿ) ಸೂಚಿಸಲಾಗಿದೆ.

ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ರೆಫರಲ್ ಆಧಾರದಲ್ಲಿ ಕೋವಿಡ್ ಚಿಕಿತ್ಸೆ ಒದಗಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಪ್ರಕರಣಗಳ ಅನುಸಾರ ಚಿಕಿತ್ಸಾ ವೆಚ್ಚವನ್ನುಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಪಾವತಿಸುತ್ತಿದೆ. ರೆಫರಲ್ ಆಧಾರದಲ್ಲಿ ದಾಖಲಾದ ಪ್ರಕರಣಗಳಲ್ಲಿ ಚಿಕಿತ್ಸೆ ಸಂಬಂಧ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳ ಕಡೆಯವರಿಂದಲೂ ಹಣ ವಸೂಲಿ ಮಾಡಿವೆ. ಟ್ರಸ್ಟ್‌ನಿಂದಲೂ ಚಿಕಿತ್ಸಾ ವೆಚ್ಚವನ್ನು ಪಡೆದುಕೊಂಡಿವೆ. ಈ ಬಗ್ಗೆ 2,692 ದೂರುಗಳನ್ನು ಟ್ರಸ್ಟ್‌ಸ್ವೀಕರಿಸಿದೆ. ಈ ಪ್ರಕರಣಗಳನ್ನು ಪರಿಶೀಲಿಸಿ, ರೋಗಿಗಳ ಕುಟುಂಬದವರಿಗೆ ಹಣ ಮರುಪಾವತಿಸಲಾಗುತ್ತಿದೆ.

ADVERTISEMENT

ರೆಫರಲ್ ಆಧಾರ ಚಿಕಿತ್ಸೆ: ರಾಜ್ಯದಲ್ಲಿ 2020ರ ಮಾ.8ರಂದು ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು.ಕೊರೊನಾ ಸೋಂಕಿತರ ಸಂಖ್ಯೆ ಏರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿಚಿಕಿತ್ಸೆಗೆ ದರ ನಿಗದಿಪಡಿಸಿ, ಶೇ 50ರಷ್ಟು ಹಾಸಿಗೆಗಳನ್ನು ಜಿಲ್ಲಾಡಳಿತ ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡುವಂತೆ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ 400ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿತ್ತು. ಈ ಆಸ್ಪತ್ರೆಗಳಲ್ಲಿ ಅರ್ಧದಷ್ಟು ಹಾಸಿಗೆಗಳನ್ನು ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡುವಂತೆ ಸೂಚಿಸಲಾಗಿತ್ತು.

ರೆಫರಲ್ ಆಧಾರಿತ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಕರಣಗಳ ಅನುಸಾರ ಖಾಸಗಿ ಆಸ್ಪತ್ರೆಗಳಿಗೆ ಟ್ರಸ್ಟ್ ಹಣ ಪಾವತಿಸುತ್ತಿದೆ.ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಪ್ರಾರಂಭವಾದಾಗಿನಿಂದ 2022ರ ಜೂನ್ ಅಂತ್ಯಕ್ಕೆ 2.39 ಲಕ್ಷ ಕೋವಿಡ್ ಪೀಡಿತರಿಗೆ ಚಿಕಿತ್ಸೆ ಒದಗಿಸಿವೆ. ಚಿಕಿತ್ಸೆ ನೀಡಿದ ಆಸ್ಪತ್ರೆಗಳಿಗೆಟ್ರಸ್ಟ್ ಮೂಲಕ ₹ 779.83 ಕೋಟಿ ಪಾವತಿಸಲಾಗಿದೆ.

ಈ ವರ್ಷ ಏಪ್ರಿಲ್‌ನಿಂದ ಜೂನ್ ಅಂತ್ಯಕ್ಕೆ 653 ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸಾ ವೆಚ್ಚ ₹ 2.83 ಕೋಟಿಯನ್ನು ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಲಾಗಿದೆ.

ದೂರಿನ ಅನುಸಾರ ಕ್ರಮ ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಅಧಿಕ ಹಣ ಪಡೆದಿರುವ ಬಗ್ಗೆಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ರಾಜ್ಯದ ಎಲ್ಲೆಡೆಯಿಂದ ದೂರುಗಳು ಬಂದಿವೆ. ಇ–ಮೇಲ್ ಮೂಲಕ 274 ಮಂದಿ 54 ಆಸ್ಪತ್ರೆಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಕಾಲ್ ಸೆಂಟರ್ ಮೂಲಕ 2,401 ಮಂದಿ 200ಕ್ಕೂ ಅಧಿಕ ಆಸ್ಪತ್ರೆಗಳ ಬಗ್ಗೆ ಮಾಹಿತಿ ಒದಗಿಸಿದ್ದಾರೆ. 911 ಪ್ರಕರಣಗಳನ್ನುಜಿಲ್ಲಾ ಮಟ್ಟದ ಕುಂದು ಕೊರತೆ ಸಮಿತಿಗೆ ವರ್ಗಾಯಿಸಲಾಗಿದೆ. ದೂರಿನ ಅನುಸಾರ ಹಣ ಹಿಂದಿರುಗಿಸಲು ಇಲಾಖೆ ಕ್ರಮ ವಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಾಸ್ಟ್‌ ಪಾವತಿಸಿದ ಮೊತ್ತದ ವಿವರ
ಅವಧಿ; ಚಿಕಿತ್ಸೆ ಪಡೆದವರು; ಪಾವತಿಸಿದ ಮೊತ್ತ

ಮೊದಲ ಅಲೆ (ಮಾರ್ಚ್‌ 2020–ಮಾರ್ಚ್‌ 2021); 1,17,930; ₹391.26 ಕೋಟಿ
ಎರಡನೇ ಅಲೆ (ಏಪ್ರಿಲ್ 2021–ಡಿಸೆಂಬರ್‌ 2021); 1,14,690; ₹376.76 ಕೋಟಿ
ಮೂರನೇ ಅಲೆ (ಜನವರಿ 2022–ಮಾರ್ಚ್‌ 2022); 7,116; ₹ 11.80 ಕೋಟಿ

**

ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ರೋಗಿಗಳ ಕಡೆಯವರಿಂದಲೂ ಹಣ ಪಡೆದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ದೂರುಗಳನ್ನು ಪರಿಶೀಲಿಸಿ, ಕುಟುಂಬಸ್ಥರಿಗೆ ಆಸ್ಪತ್ರೆಗಳಿಂದ ಹಣ ಹಿಂದಿರುಗಿಸಲಾಗುತ್ತಿದೆ.
–ಡಾ.ಕೆ. ಸುಧಾಕರ್, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.