ADVERTISEMENT

ಕೋವಿಡ್: ಬೆಂಗಳೂರಿನಲ್ಲಿ ಸಜ್ಜಾಗುತ್ತಿವೆ ಖಾಸಗಿ ಆಸ್ಪತ್ರೆ

5 ಸಾವಿರಕ್ಕೂ ಅಧಿಕ ಹಾಸಿಗೆಗಳು ಚಿಕಿತ್ಸೆಗೆ ಮೀಸಲು

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 21:08 IST
Last Updated 8 ಜನವರಿ 2022, 21:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೋವಿಡ್ ‍ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳೂ ಸಜ್ಜಾಗುತ್ತಿದ್ದು, ಸರ್ಕಾರಿ ಕೋಟಾದಡಿ ಚಿಕಿತ್ಸೆಗೆ 5 ಸಾವಿರಕ್ಕೂ ಅಧಿಕ ಹಾಸಿಗೆಗಳು ವಾರದಲ್ಲಿ ಲಭ್ಯವಾಗಲಿವೆ.

ಹತ್ತು ದಿನಗಳಿಂದ ನಗರದಲ್ಲಿ ಸೋಂಕಿತರ ಸಂಖ್ಯೆ ಏರುಮುಖವಾಗಿದೆ. 24 ಗಂಟೆಗಳ ಅವಧಿಯಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಹೀಗಾಗಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆಗೆ ಎರಡು ದಿನಗಳ ಹಿಂದೆ ಸಭೆ ನಡೆಸಿ, ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದ್ದಾರೆ. ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಿದ್ದಾರೆ.

ಕಳೆದ ವರ್ಷ ಮಾರ್ಚ್‌ ಮೂರನೇ ವಾರದ ಬಳಿಕ ಎರಡನೇ ಅಲೆ ಕಾಣಿಸಿಕೊಂಡಿತ್ತು. ಕೊರೊನಾ ಸೋಂಕಿತರ ಸಂಖ್ಯೆ ಏರುಗತಿ ಪಡೆಯುತ್ತಿದ್ದಂತೆ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಹಲವರು ಚಿಕಿತ್ಸೆ ಸಂಬಂಧ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾವಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಶಿಫಾರಸು ಅನುಸಾರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರೂ ಕೆಲವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತಿರಲಿಲ್ಲ.ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಈಗಲೇ ಹಾಸಿಗೆಗಳನ್ನು ಮೀಸಲಿರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ADVERTISEMENT

ಸದ್ಯ ಸರ್ಕಾರಿ ವ್ಯವಸ್ಥೆಯಡಿ ಸರ್.ಸಿ.ವಿ. ರಾಮನ್ ಆಸ್ಪತ್ರೆಯನ್ನು ಕೋವಿಡ್ ಮೀಸಲು ಆಸ್ಪತ್ರೆ ಎಂದು ಗುರುತಿಸಲಾಗಿದೆ.ವಿಕ್ಟೋರಿಯಾ, ಬೌರಿಂಗ್ ಮತ್ತು ಲೇಡಿ ಕರ್ಜನ್, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ, ಕೆ.ಸಿ. ಜನರಲ್, ಜಯನಗರ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳನ್ನು ಮೀಸಲಿಡಲಾಗಿದೆ.

500ಕ್ಕೂ ಅಧಿಕ ಆಸ್ಪತ್ರೆ: ನಗರದಲ್ಲಿಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟ 1,836 ಹಾಸಿಗೆಗಳಲ್ಲಿ ಸದ್ಯ 1,667 ಹಾಸಿಗೆಗಳು ಖಾಲಿ ಉಳಿದಿವೆ. ಕೊರೊನಾ ಸೋಂಕಿತರಲ್ಲಿ 166 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ವ್ಯವಸ್ಥೆಯಡಿ ಕೋವಿಡ್ ಚಿಕಿತ್ಸೆಗೆ 500ಕ್ಕೂ ಅಧಿಕ ಆಸ್ಪತ್ರೆಗಳನ್ನು ಗುರುತಿಸಲಾಗಿದೆ.

‘ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವುದರಿಂದ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಸೋಂಕಿತರಿಗೆ ಲಕ್ಷಣಗಳು ಅಷ್ಟಾಗಿ ಗೋಚರಿಸುತ್ತಿಲ್ಲ. ಹೀಗಾಗಿ, ಹೆಚ್ಚಿನವರು ಮನೆ ಆರೈಕೆಗೆ ಒಳಗಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 90ಕ್ಕೂ ಅಧಿಕ ಹಾಸಿಗೆಗಳು ಸದ್ಯ ಖಾಲಿಯಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅರ್ಧಕ್ಕೂ ಅಧಿಕ ಹಾಸಿಗೆಗಳು ಭರ್ತಿಯಾದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ವೈದ್ಯಕೀಯ ಕಾಲೇಜುಗಳಲ್ಲಿ ವ್ಯವಸ್ಥೆ’

‘ಈ ಹಿಂದೆ ಕೋವಿಡ್‌ ಪ್ರಕರಣಗಳು ಏರಿಕೆ ಕಂಡಾಗ ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿತ್ತು. ಎರಡು ಅಲೆಗಳನ್ನು ಎದುರಿಸಿರುವುದರಿಂದ ಈ ಬಾರಿ ಸಮಸ್ಯೆಯಾಗದಂತೆ ಚಿಕಿತ್ಸೆಗೆ ಕ್ರಮವಹಿಸಲಾಗುವುದು.ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲು ಸರ್ಕಾರ ತಿಳಿಸಿದೆ. ಈಗಾಗಲೇ ನಮ್ಮ ಆಸ್ಪತ್ರೆಗಳು ಚಿಕಿತ್ಸೆಗೆ ಸಜ್ಜಾಗಿವೆ’ ಎಂದುಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್.ಎಂ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.