ಬೆಂಗಳೂರು: ಕೋವಿಡ್ ಮೂರನೇ ಅಲೆ ನಿಭಾಯಿಸಲು ಈಗಿನಿಂದಲೇ ಸಿದ್ಧರಾಗಬೇಕಿದ್ದು, ತಕ್ಷಣವೇ ಅದಕ್ಕೊಂದು ಕಾರ್ಯಪಡೆ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಎರಡನೇ ಅಲೆ ನಿಯಂತ್ರಣದ ಕುರಿತು ಕಾವೇರಿಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಜತೆ ಏರ್ಪಡಿಸಿದ್ದ ಸಭೆಯಲ್ಲಿ ಮೂರನೇ ಅಲೆಯ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಸಮರ್ಥವಾಗಿ ನಿಯಂತ್ರಿಸಲು ಕಾರ್ಯತಂತ್ರ ರೂಪಿಸಬೇಕು ಎಂದು ಹೇಳಿದರು.
ಸಚಿವರು ತಮಗೆ ಉಸ್ತುವಾರಿ ನೀಡಿರುವ ಜಿಲ್ಲೆಗಳಲ್ಲಿ ಮತ್ತು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಾಸ್ತವ್ಯ ಹೂಡಿ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಸಚಿವರು ಜಿಲ್ಲೆಗಳಲ್ಲಿ ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.
ಲಾಕ್‌ಡೌನ್ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು. ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸುವುದು ಮತ್ತು ರೆಮ್‌ಡಿಸಿವಿರ್ ಅನ್ನು ಅಗತ್ಯಕ್ಕೆ ಅನುಸಾರ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆ ಬೆಡ್‌ಗಳ ಬಗ್ಗೆ ನಿಗಾ ಇಡಬೇಕು. ಆಮ್ಲಜನಕ, ರೆಮ್‌ಡಿಸಿವಿರ್ ಹಾಗೂ ಬೆಡ್ ಸೇರಿದಂತೆ ಇತರ ವಿಷಯಗಳಲ್ಲಿ ಅಕ್ರಮ ಕಂಡು ಬಂದರೆ ಕೈಗೊಳ್ಳಬೇಕು. ವಾರ್ ರೂಮ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ಎಂದರು.
ಹಂತ– ಹಂತವಾಗಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಆಸ್ಪತ್ರೆಗಳಿಗೆ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹಾಕಲು ಈಗಿನಿಂದಲೇ ಕೆಲಸ ಶುರು ಮಾಡಲು ಯಡಿಯೂರಪ್ಪ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.