ಯಲಹಂಕ:ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆ ಮತ್ತು ಪಶುವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟ ರಾವ್ ನಾಡಗೌಡ ಅಅಭಿಪ್ರಾಯಪಟ್ಟರು.
ಕರ್ನಾಟಕ ಪಶುವೈದ್ಯಕೀಯ ಸಂಘದ ಆಶ್ರಯದಲ್ಲಿ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪಶುವೈದ್ಯರ ತಾಂತ್ರಿಕ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿವಿಕೋಪ, ಪ್ರವಾಹ, ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳಿಂದ ಬೆಳೆಗಳು ನಾಶವಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ, ಪಶುವೈದ್ಯರು ಹಾಗೂ ರೈತರು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
ರೈತರು ಕೃಷಿಯ ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಹಂದಿ, ಮೊಲ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ತಮ್ಮ ಆರ್ಥಿಕಮಟ್ಟ ಸುಧಾರಣೆಯಾಗುವ ಮೂಲಕ ಸಾಲಗಳಿಗೆ ಸಿಲುಕುವ ಪರಿಸ್ಥಿತಿ ಉದ್ಭವವಾಗುವುದಿಲ್ಲ ಎಂದು ತಿಳಿಸಿದರು.
ಇಲಾಖೆಯಿಂದ ತಂತ್ರಾಂಶವನ್ನು ಅಭಿವೃದ್ಧಿಸಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗಿದೆ. ಇದರಿಂದ ಆನ್ಲೈನ್ ಮೂಲಕ ಇಲಾಖೆಯ ಯೋಜನೆಗಳ ಮಾಹಿತಿ, ಅರ್ಜಿ ಸಲ್ಲಿಕೆ, ವೈದ್ಯರು ಕಾರ್ಯನಿರ್ವಹಿಸುತ್ತಿರುವ ಪ್ರದೇಶ, ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಿ, ದನಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರ ನಿಯೋಜನೆ, ನೇರವಾಗಿ ಹಸುಗಳ ಮಾರಾಟ ಮತ್ತಿತರ ಕಾರ್ಯಗಳಿಗೆ ಸಹಾಯವಾಗಿದೆ. ಹಸುಗಳಿಗೆ ಚಿಪ್ ಅಳವಡಿಸಿರುವುದರಿಂದ ವಾಸಿಸುತ್ತಿರುವ ಜಾಗ ಸೇರಿದಂತೆ ಅದರ ಸಂಪೂರ್ಣ ಮಾಹಿತಿ ದೊರೆಯುತ್ತಿದೆ ಎಂದು ಹೇಳಿದರು.
ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ(ಬೀದರ್) ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ ಮಾತನಾಡಿ, ವಿಶ್ವವಿದ್ಯಾಲಯದಿಂದ ನೂತನವಾಗಿ ಆವಿಷ್ಕಾರಗೊಂಡ ತಂತ್ರಜ್ಞಾನಗಳು ಮತ್ತು ಸಂಶೋಧನೆಗಳನ್ನು ಕಾಲಕಾಲಕ್ಕೆ ರೈತರಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ನಿರ್ದೇಶಕ ಡಾ.ಎಂ.ಟಿ.ಮಂಜುನಾಥ್, ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ. ಜಿ.ಯಲಗೋಡ ಮತ್ತಿತರರು ಉಪಸ್ಥಿತರಿದ್ದರು.ಅಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.