ADVERTISEMENT

ನಿಮ್ಹಾನ್ಸ್: 200ಕ್ಕೂ ಅಧಿಕ ಮಂದಿಗೆ ಸಿಪಿಆರ್ ತರಬೇತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:50 IST
Last Updated 17 ಅಕ್ಟೋಬರ್ 2024, 15:50 IST
ಸಂಸ್ಥೆಯ ಸಿಬ್ಬಂದಿ ರೋಗಿಗಳ ಕಡೆಯವರಿಗೆ ಸಿಪಿಆರ್ ಬಗ್ಗೆ ತರಬೇತಿ ನೀಡಿದರು
ಸಂಸ್ಥೆಯ ಸಿಬ್ಬಂದಿ ರೋಗಿಗಳ ಕಡೆಯವರಿಗೆ ಸಿಪಿಆರ್ ಬಗ್ಗೆ ತರಬೇತಿ ನೀಡಿದರು   

ಬೆಂಗಳೂರು: ವಿಶ್ವ ಹೃದಯ ಮರು ಚಾಲನೆ ದಿನದ ಪ್ರಯುಕ್ತ ರಾಷ್ಟ್ರೀಯ ಮಾನಸಿಕ  ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್‌) 200ಕ್ಕೂ ಅಧಿಕ ಮಂದಿಗೆ ಹೃದಯ, ಶ್ವಾಸಕೋಶ ಕಾಯಿಲೆಯ ಪ್ರಾಥಮಿಕ ಚಿಕಿತ್ಸೆಯ (ಸಿಪಿಆರ್) ಕುರಿತು ಬುಧವಾರ ತರಬೇತಿ ನೀಡಲಾಯಿತು.

ಸಂಸ್ಥೆಯ ನರ್ಸಿಂಗ್ ವಿಭಾಗವು ನ್ಯೂರೊ ಅನಸ್ತೇಷಿಯಾ, ನ್ಯೂರೊ ಕ್ರಿಟಿಕಲ್ ಕೇರ್ ವಿಭಾಗದ ಸಹಯೋಗದಲ್ಲಿ ತರಬೇತಿ ಹಮ್ಮಿಕೊಂಡಿತ್ತು. ರೋಗಿಗಳ ಕಡೆಯವರಿಗೆ ಸಿಪಿಆರ್ ಮಹತ್ವ, ಕಾರ್ಯವಿಧಾನಗಳನ್ನು ತಿಳಿಸಿಕೊಡಲಾಯಿತು. ಮಾನವಾಕೃತಿಯ ಮಾದರಿಯ ಮೇಲೆ ಸಿಪಿಆರ್ ಪ್ರಾತ್ಯಕ್ಷಿಕೆ ನೀಡಲಾಯಿತು.

‘ಹಠಾತ್ ಹೃದಯಾಘಾತದ ಸಂದರ್ಭದಲ್ಲಿ ವ್ಯಕ್ತಿಯನ್ನು ಪ್ರಾಣಾ‍ಪಾಯದಿಂದ ಪಾರು ಮಾಡಲು ಸಿಪಿಆರ್ ಸಹಾಯಕ. ಸಿಪಿಆರ್‌ ಪ್ರಕ್ರಿಯೆ ಯಾವ ರೀತಿ‌ ಎಂಬುದು ಬಹುತೇಕರಿಗೆ ತಿಳಿದಿಲ್ಲ. ನಿಂತಿರುವ ಹೃದಯದ ಬಡಿತವನ್ನು ಪುನಃ ಪ್ರಾರಂಭವಾಗುವಂತೆ ಮಾಡುವ ಪ್ರಕ್ರಿಯೆಯೇ ಸಿಪಿಆರ್’ ಎಂದು ಸಂಸ್ಥೆಯ ವೈದ್ಯರು ತಿಳಿಸಿದರು.

ADVERTISEMENT

‘ಹೃದಯಾಘಾತ ಅಥವಾ ಹೃದಯ ಸ್ತಂಭನ ಉಂಟಾದಾಗ ತಕ್ಷಣ ತುರ್ತು ಚಿಕಿತ್ಸೆ ಒದಗಿಸದಿದ್ದಲ್ಲಿ ಜೀವಕ್ಕೆ ಅಪಾಯ ಆಗಲಿದೆ. ಆದ್ದರಿಂದ ಸಿಪಿಆರ್‌ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಈ ಪ್ರಕ್ರಿಯೆಯಿಂದ ವ್ಯಕ್ತಿಯ ಜೀವ ಉಳಿಸಲು ಸಾಧ್ಯ’ ಎಂದರು. 

ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಮುರಳೀಧರನ್, ಸ್ಥಾನಿಕ ವೈದ್ಯಾಧಿಕಾರಿ ಡಾ. ಶಶಿಧರ್ ಎಚ್.ಎನ್., ನ್ಯೂರೊ ಅನಸ್ತೇಷಿಯಾ ವಿಭಾಗದ ಮುಖ್ಯಸ್ಥ ಡಾ.ಶ್ರೀಗಣೇಶ್, ಪ್ರಾಧ್ಯಾಪಕರಾದ ಡಾ.ವಿ.ಜೆ.ರಮೇಶ್, ಡಾ.ಸಾಯಿ ಲಕ್ಷ್ಮೀ ಗಾಂಧಿ, ಡಾ.ಗೋಪಿಚಂದ್ರನ್ ಎಲ್. ಸಿಪಿಆರ್ ಬಗ್ಗೆ ಪ್ರಾದೇಶಿಕ ಭಾಷೆಯಲ್ಲಿ ಜಾಗೃತಿ ಪರಿಕರ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.