ಬೆಂಗಳೂರು: ಮಣಿಪಾಲ್ ಆಸ್ಪತ್ರೆಗಳ ಸಮೂಹವು ‘ಹೃದಯದ ರಕ್ಷಕ 2.0’ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದಡಿ ನಗರದ ಆಯ್ದ 40 ಸಂಚಾರ ಪೊಲೀಸರಿಗೆ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ತರಬೇತಿ (ಸಿಪಿಆರ್) ನೀಡಲಾಯಿತು.
ಈ ತರಬೇತಿಗೆ ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್.ಅನುಚೇತ್ ಚಾಲನೆ ನೀಡಿ ಮಾತನಾಡಿದರು. ‘ಹೃದಯದ ಬಗ್ಗೆ ಜಾಗೃತಿ ಮೂಡಿಸಲು ಸಂಚಾರ ದ್ವೀಪಗಳಲ್ಲಿ ಹೃದಯದ ಆಕಾರ ಮೂಡಿಸಲಾಗುತ್ತಿದೆ. ಸಂಚಾರ ಸಿಗ್ನಲ್‌ಗಳಲ್ಲಿ ಜನರು ತಾಳ್ಮೆಯಿಂದ ಕಾಯಬೇಕು. ಹೃದಯಾಘಾತಕ್ಕೆ ಒಳಗಾದವರಿಗೆ ಸಿಪಿಆರ್ ವಿಧಾನದಿಂದ ಹೃದಯವನ್ನು ಪುನರುಜ್ಜೀವನಗೊಳಿಸಿ, ವ್ಯಕ್ತಿಯ ಜೀವ ಉಳಿಸಬಹುದಾಗಿದೆ.ಇದನ್ನು ಯಾವ ರೀತಿ ಬಳಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಮಣಿಪಾಲ್ ಆಸ್ಪತ್ರೆಗಳ ಸಮೂಹ ಅಭಿವೃದ್ಧಿಪಡಿಸಿರುವ ಕ್ಯೂಆರ್ ಕೋಡ್ ಸಹಕಾರಿಯಾಗಲಿದೆ. ಅದನ್ನು ಎಲ್ಲ ಸಂಚಾರ ಸಿಗ್ನಲ್‌ಗಳಿಗೆ ವಿಸ್ತರಿಸಬೇಕು’ ಎಂದು ಹೇಳಿದರು.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ರಂಜನ್ ಶೆಟ್ಟಿ, ‘ತುರ್ತು ಸಹಾಯ (ಎಸ್‌ಒಎಸ್) ಕ್ಯೂಆರ್ ಕೋಡ್ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೃದಯದ ಸಮಸ್ಯೆ ಕಾಣಿಸಿಕೊಂಡಾಗ ಪ್ರಾಥಮಿಕ ಅಥವಾ ತುರ್ತು ಚಿಕಿತ್ಸೆಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ವೈದ್ಯಕೀಯ ಸೇವೆ ಪಡೆದುಕೊಳ್ಳಬಹುದು. ವ್ಯಕ್ತಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ತುರ್ತು ಸಂಖ್ಯೆಗೆ ಸಂಪರ್ಕ ಕಲ್ಪಿಸಿ, ಆಂಬುಲೆನ್ಸ್ ಸೇವೆಗೆ ನಿರ್ದೇಶಿಸಲಾಗು ತ್ತದೆ. ಇನ್ನಷ್ಟು ಸಂಚಾರ ಪೊಲೀಸರಿಗೆ ಸಿಪಿಆರ್ ತರಬೇತಿ ನೀಡಲಾಗುತ್ತದೆ. ಈ ಮೂಲಕ ನಗರವನ್ನು ‘ಹಾರ್ಟ್ ಸ್ಮಾರ್ಟ್ ಸಿಟಿ’ಯನ್ನಾಗಿ ಪರಿವರ್ತಿಸಲಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.