ಬೆಂಗಳೂರು: ಪರಿಸರ ಸ್ನೇಹಿಯೆಂದು ಮಾರಾಟ ಮಾಡಲಾಗುತ್ತಿರುವ ಹಸಿರು ಪಟಾಕಿಗಳಿಂದಲೂ ಅವಘಡಗಳು ಸಂಭವಿಸುತ್ತಿವೆ. ನಗರದ ಕಣ್ಣಿನ ಆಸ್ಪತ್ರೆಗಳಲ್ಲಿ ವರದಿಯಾಗುವ ಪಟಾಕಿ ಗಾಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಸರ್ಕಾರೇತರ ಸಂಸ್ಥೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ಹಸಿರು ಪಟಾಕಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಹಬ್ಬದ ಸಂದರ್ಭದಲ್ಲಿ ನಿಗದಿತ ಅವಧಿಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಿ, ಮಾರ್ಗಸೂಚಿ ಹೊರಡಿಸಲಾಗುತ್ತಿದೆ. ಇಷ್ಟಾಗಿಯೂ ವರ್ಷದಿಂದ ವರ್ಷಕ್ಕೆ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ ಮಾಡಿಕೊಳ್ಳುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಲಕ್ಷ್ಮಿ ಬಾಂಬ್, ಬಿಜಲಿ ಪಟಾಕಿ ಹಾಗೂ ಹೂ ಕುಂಡ ಸಿಡಿತದಿಂದಲೇ ಹೆಚ್ಚಿನವರು ಗಾಯಗೊಳ್ಳುತ್ತಿದ್ದಾರೆ.
ಪಟಾಕಿ ಗಾಯಗಳಿಗೆ ಸಂಬಂಧಿಸಿದಂತೆ ಹಬ್ಬದ ಅವಧಿಯಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 2020ರಲ್ಲಿ 23, 2021ರಲ್ಲಿ 33, 2022 ಹಾಗೂ 2023ರಲ್ಲಿ ತಲಾ 40 ಪ್ರಕರಣಗಳು ವರದಿಯಾಗಿದ್ದವು. ನಾರಾಯಣ ನೇತ್ರಾಲಯದಲ್ಲಿ ಕ್ರಮವಾಗಿ 24, 17, 45 ಹಾಗೂ 58 ಮಂದಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದಿದ್ದರು. ಕಳೆದ ವರ್ಷ ಪಟಾಕಿ ಗಾಯಕ್ಕೆ ಸಂಬಂಧಿಸಿದಂತೆ ಮಿಂಟೊ ಆಸ್ಪತ್ರೆಗೆ ದಾಖಲಾದವರಲ್ಲಿ ಗಾಯದ ತೀವ್ರತೆಗೆ ಎಂಟು ಮಂದಿ ದೃಷ್ಟಿ ಕಳೆದುಕೊಂಡಿದ್ದರು. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 15ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದರು. ನೇತ್ರಧಾಮ, ಡಾ. ಅಗರ್‌ವಾಲ್ಸ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿಯೂ ಪ್ರಕರಣಗಳು ವರದಿಯಾಗಿದ್ದವು.
ವೀಕ್ಷಿಸುವ ವೇಳೆ ಗಾಯ: ಪಟಾಕಿ ಸಿಡಿಸುವವರ ಜತೆಗೆ ವೀಕ್ಷಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡು, ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಮಿಂಟೊದಲ್ಲಿ ಕಳೆದ ವರ್ಷ ಚಿಕಿತ್ಸೆ ಪಡೆದವರಲ್ಲಿ ಅರ್ಧದಷ್ಟು ಮಂದಿ ಪಟಾಕಿ ಸಿಡಿತ ವೀಕ್ಷಿಸುತ್ತಿರುವವರು, ಪಾದಚಾರಿಗಳು ಹಾಗೂ ವಾಹನ ಸವಾರರಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದವರಲ್ಲಿ 25 ಮಂದಿ ಸಿಡಿತ ವೀಕ್ಷಿಸುವ ವೇಳೆ ಗಾಯಗೊಂಡವರಾಗಿದ್ದಾರೆ.
‘ಪಟಾಕಿ ಹಚ್ಚುವವರು ಮಾತ್ರವಲ್ಲದೆ, ಅದನ್ನು ವೀಕ್ಷಿಸುವವರೂ ಎಚ್ಚರವಾಗಿರಬೇಕು. ಹಸಿರು ಪಟಾಕಿಗಳಾದರೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಪಟಾಕಿ ಸಿಡಿಸಬೇಕು’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜು ಜಿ. ಸಲಹೆ ನೀಡಿದರು.
ಹಸಿರು ಪಟಾಕಿಗಳಲ್ಲಿಯೂ ನಿಗದಿತ ಪ್ರಮಾಣದಲ್ಲಿ ರಾಸಾಯನಿಕಗಳು ಇರುತ್ತವೆ. ಕಣ್ಣು ಸೂಕ್ಷ್ಮ ಅಂಗವಾಗಿರುವುದರಿಂದ ಸಣ್ಣ ಕಿಡಿಯೂ ದೊಡ್ಡ ಹಾನಿ ಮಾಡುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸಬೇಕುಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ಅಧ್ಯಕ್ಷ
ಹಸಿರು ಪಟಾಕಿಗಳೂ ಅಪಾಯಕಾರಿ’
‘ಮಾರುಕಟ್ಟೆಯಲ್ಲಿ ಎಲ್ಲವನ್ನೂ ಹಸಿರು ಪಟಾಕಿಗಳೆಂದು ಮಾರಾಟ ಮಾಡಲಾಗುತ್ತಿದೆ. ಇದನ್ನು ಖರೀದಿಸುವ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೆ ಸಿಡಿಸುವುದರಿಂದ ಅಪಾಯವನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪರವಾನಗಿ ಪಡೆದ ಮಳಿಗೆಗಳಲ್ಲಿ ಹಸಿರು ಪಟಾಕಿ ಬಗ್ಗೆ ಖಚಿತಪಡಿಸಿಕೊಂಡು ಖರೀದಿಸಬೇಕು. ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಶೇ 50ರಷ್ಟು ಕಡಿಮೆ ಇರುತ್ತದೆ. ಮಾಲಿನ್ಯ ಪ್ರಮಾಣ ಕಡಿಮೆಯಾದರೂ ಸ್ಫೋಟ ಮತ್ತು ಶಬ್ದದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ’ ಎಂದು ನಗರದ ನೇತ್ರ ತಜ್ಞರು ತಿಳಿಸಿದ್ದಾರೆ. ‘ವರ್ಷದಿಂದ ವರ್ಷಕ್ಕೆ ಪಟಾಕಿ ಗಾಯಗಳು ಹೆಚ್ಚುತ್ತಿವೆ. ಪಟಾಕಿಗಳು ಸ್ಫೋಟಗೊಳ್ಳಲು ಬಳಸುವ ರಾಸಾಯನಿಕಗಳು ಅಪಾಯಕಾರಿಯಾಗಿದ್ದು ಅನಿರೀಕ್ಷಿತ ಸಿಡಿತಗಳು ಹಾಗೂ ಬೆಂಕಿಯ ಕಿಡಿಗಳು ಕಣ್ಣಿಗೆ ಹಾನಿ ಮಾಡಲಿವೆ. ಪಟಾಕಿ ಅವಘಡಗಳಿಂದ ಗಾಯಗೊಳ್ಳುವವರಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ನೋಡುಗರೇ ಆಗಿರುತ್ತಾರೆ’ ಎಂದು ಡಾ. ಅಗರ್‌ವಾಲ್ಸ್ ಆಸ್ಪತ್ರೆಯ ನೇತ್ರ ಸಲಹೆಗಾರ ಡಾ. ರವಿ ದೊರೈರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.