ADVERTISEMENT

ಪಟಾಕಿ ಅವಘಡ: ಮೂರು ಆಸ್ಪತ್ರೆ, ನೂರಕ್ಕೂ ಹೆಚ್ಚು ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 23:41 IST
Last Updated 3 ನವೆಂಬರ್ 2024, 23:41 IST
<div class="paragraphs"><p>ಪಟಾಕಿಯಿಂದ ಗಾಯಗೊಂಡ ಮಕ್ಕಳಿಗೆ&nbsp;ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು</p></div>

ಪಟಾಕಿಯಿಂದ ಗಾಯಗೊಂಡ ಮಕ್ಕಳಿಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು

   

ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ನಗರದಾದ್ಯಂತ ಮೂರು ದಿನಗಳಲ್ಲಿ (ಅ.31ರಿಂದ ನ.3ರವರೆಗೆ) ಮೂರು ಆಸ್ಪತ್ರೆಗಳಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ ಮಾಡಿಕೊಂಡಿರುವ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ADVERTISEMENT

ಪಟಾಕಿ ಸಿಡಿಸುತ್ತಿದ್ದವರ ಜೊತೆಗೆ, ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದವರಿಗೆ ಹಾಗೂ ಪಟಾಕಿ ತ್ಯಾಜ್ಯದ ಪಕ್ಕ ನಡೆದು ಹೋಗುತ್ತಿದ್ದವರಿಗೂ ಪಟಾಕಿ ಸಿಡಿದು ಗಾಯಗಳಾಗಿದ್ದು, ಅವರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನಾರಾಯಣ ನೇತ್ರಾಲಯದಲ್ಲಿ 73, ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 53 ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆಯಲ್ಲಿ 18 ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಕೆಲವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 38 ಮಂದಿ ಹೊರ ರೋಗಿಗಳು, 15 ಮಂದಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡವರು 23 ಮಂದಿ. ನಾಲ್ವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಲ್ಲಿನ ಒಟ್ಟು ಪ್ರಕರಣಗಳಲ್ಲಿ 34 ಮಕ್ಕಳಿದ್ದಾರೆ. 

ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ದಾಖಲಾಗಿರುವ 18 ಪ್ರಕರಣಗಳಲ್ಲಿ, 14 ಮಕ್ಕಳ ಪ್ರಕರಣಗಳಾಗಿವೆ. ಮೂರು ವರ್ಷದಿಂದ 14 ವರ್ಷಗಳವರೆಗಿನ ಮಕ್ಕಳು ಗಾಯಗೊಂಡಿದ್ದಾರೆ. ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಕ್ಕಳಲ್ಲದೆ ನಾಲ್ವರು ವಯಸ್ಕರರೂ ವಿವಿಧೆಡೆ ಗಾಯಗೊಂಡಿದ್ದು, 52 ವರ್ಷದ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ‘ಎಲ್ಲರಿಗೂ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಈ ವಾರ ಫಾಲೋಅಪ್‌ಗೆ ಬರಲು ತಿಳಿಸಲಾಗಿದೆ’ ಎಂದು ಕರ್ತವ್ಯದಲ್ಲಿರುವ ವೈದ್ಯರು ತಿಳಿಸಿದ್ದಾರೆ.

ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳಲ್ಲಿ 35 ಮಕ್ಕಳು, 38 ಮಂದಿ ವಯಸ್ಕರರು ಸೇರಿದ್ದಾರೆ. ಹಾನಿಗೊಳಗಾದವರಲ್ಲಿ ಯುವ ಜನರೇ ಹೆಚ್ಚಾಗಿದ್ದಾರೆ. ‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಣ್ಣಿನ ಗಾಯಗಳು ಹಾಗೂ ತುರ್ತು ಪ್ರಕರಣಗಳು ಹೆಚ್ಚಾಗಿವೆ’ ಎಂದು ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ ತಿಳಿಸಿದ್ದಾರೆ. 

‘ಪಟಾಕಿ ಹೊಡೆಯುವುದನ್ನು ನೋಡುತ್ತಾ ನಿಂತಿದ್ದ 37 ಮಂದಿಯ ಕಣ್ಣಿಗೆ ಗಾಯಗಳಾಗಿವೆ. ಕೈಯಲ್ಲಿದ್ದ ಪಟಾಕಿ ಸಿಡಿದು 10 ವರ್ಷದ ಬಾಲಕನೊಬ್ಬನ ಕಣ್ಣಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವನಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಹತ್ತು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದರು.

ತ್ಯಾಜ್ಯದಲ್ಲಿ ಬಿದ್ದಿದ್ದ ಪಟಾಕಿ ಸಿಡಿದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕಣ್ಣಿನ ಕಾರ್ನಿಯಲ್‌ಗೆ ಹಾನಿಯಾಗಿದೆ. ಇದು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿದೆ ರೋಹಿತ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.