ಬೆಂಗಳೂರು: ಕೆನೆಪದರ ಮೀಸಲಾತಿ ಸೌಲಭ್ಯವನ್ನು ಪರಿಶಿಷ್ಟ ಜಾತಿಯವರಿಗೂ ನೀಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಚಿ.ನಾ.ರಾಮು ಅವರ ‘ಬಲಿತ ದಲಿತರ ತುಳಿತ ನನ್ನ ಜನ ಅನಾಥ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಜಕೀಯ ಮುತ್ಸದ್ದಿಗಳು, ಯುವಜನರು ಕೆನೆಪದರ ಮೀಸಲಾತಿ ಬಗ್ಗೆ ಏಕೆ ಧ್ವನಿಯೆತ್ತಲಿಲ್ಲ? ನಾವು ಈ ಬಗ್ಗೆ ಚಿಂತನೆ ಮಾಡಬೇಕು’ ಎಂದು ಅವರು ಹೇಳಿದರು.
‘71 ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳಿಗೆ ಆರ್ಥಿಕ ನ್ಯಾಯ ಕೊಡುವ ಪ್ರಯತ್ನಗಳು ಆಗಲಿಲ್ಲ. ಅವರ ಹಕ್ಕುಗಳು ಅವರಿಗೆ ಮುಟ್ಟಲೇ ಇಲ್ಲ’ ಎಂದರು.
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ‘ಒಮ್ಮೆ ಮೀಸಲಾತಿ ಸೌಲಭ್ಯದ ಲಾಭ ಪಡೆದವರು ಮತ್ತೊಮ್ಮೆ ಪಡೆಯಬಾರದು. ಈ ರೀತಿ ಪಡೆಯುವುದು ಸಂವಿಧಾನದ ದೃಷ್ಟಿಯಲ್ಲಿ ಸರಿಯಲ್ಲ. ಆದರೆ, ಇಂದು ಮೀಸಲಾತಿಯ ಲಾಭ ಸಿಕ್ಕಿದವರಿಗೇ ಸಿಗುತ್ತಿದೆ. ಮೀಸಲಾತಿ ಎನ್ನುವುದು ಅವರಿಗೇ ಮೀಸಲಾಗಿದೆಯೇನೋ ಎಂಬ ಸಂದೇಹವಿದೆ. ಈ ಬಗ್ಗೆ ಒಮ್ಮೆ ಮಾತನಾಡಿದಾಗ ಸಾಕಷ್ಟು ವಿರೋಧ ಎದುರಿಸಬೇಕಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.