ADVERTISEMENT

ಜಾಗೃತಿ, ಕಾಳಜಿ ಮೂಡಿದರೆ ಪರಿಸರ ರಕ್ಷಣೆ: ಸಚಿವ ಕೃಷ್ಣ ಬೈರೇಗೌಡ

‘ಪರಿಸರ ಪ್ರಜ್ಞೆ ಮಾಸ’ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 16:22 IST
Last Updated 16 ಜೂನ್ 2024, 16:22 IST
ರಾಚೇನಹಳ್ಳಿ ಕರೆ ಆವರಣದಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಹಾಗೂ ಮಕ್ಕಳ ಜೊತೆಗೂಡಿ ಸಚಿವ ಕೃಷ್ಣಬೈರೇಗೌಡ ಗಿಡನೆಟ್ಟು ನೀರು ಹಾಕಿದರು.
ರಾಚೇನಹಳ್ಳಿ ಕರೆ ಆವರಣದಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಹಾಗೂ ಮಕ್ಕಳ ಜೊತೆಗೂಡಿ ಸಚಿವ ಕೃಷ್ಣಬೈರೇಗೌಡ ಗಿಡನೆಟ್ಟು ನೀರು ಹಾಕಿದರು.   

ಯಲಹಂಕ: ‘ಗಿಡ ನೆಡುವುದರ ಜೊತೆಗೆ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮತ್ತು ಕಾಳಜಿ ಮೂಡಿದರೆ ಸಹಜವಾಗಿಯೇ ಪರಿಸರ ರಕ್ಷಣೆಯಾಗುತ್ತದೆ‘ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಪರಿಸರ ಪ್ರಜ್ಞೆಯ ಮಾಸದ ಪ್ರಯುಕ್ತ ಬಿಬಿಎಂಪಿ ಅರಣ್ಯ ವಿಭಾಗದ ಸಹಯೋಗದೊಂದಿಗೆ ಬ್ಯಾಟರಾಯನಪುರ ಕ್ಷೇತ್ರದ ರಾಚೇನಹಳ್ಳಿ ಕರೆ ಆವರಣದಲ್ಲಿ ಆಯೋಜಿಸಿದ್ದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆನೀಡಿ ಅವರು ಮಾತನಾಡಿದರು.

ಕ್ಷೇತ್ರದ ನಾಗರಿಕರು ಹಾಗೂ ಕೆರೆ ಸುತ್ತಮುತ್ತಲ ಅಪಾರ್ಟ್‌ಮೆಂಟ್‌ ನಿವಾಸಿಗಳ ಜೊತೆಗೂಡಿ, ಈ ತಿಂಗಳುಪೂರ್ತಿ ಪರಿಸರ ಜಾಗೃತಿ ಮಾಹೆಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ನಾಗರಿಕರು ಹಾಗೂ ವಿಶೇಷವಾಗಿ ಮಕ್ಕಳನ್ನು ತೊಡಗಿಸಿಕೊಂಡು ಗಿಡನೆಡುವ ಮತ್ತು ಸ್ವಚ್ಛತೆ ಸೇರಿದಂತೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಲಾಗುವುದು ಎಂದರು.

ADVERTISEMENT

ಒಟ್ಟಾರೆ ಪರಿಸರ ಚೆನ್ನಾಗಿರಬೇಕೆಂಬುದು ಈ ಅಭಿಯಾನದ ಉದ್ದೇಶ. ರಾಚೇನಹಳ್ಳಿ ಕೆರೆ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಹಕಾರದೊಂದಿಗೆ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತಿದೆ. ನಾಲ್ಕು ವಾರಗಳು ಸತತವಾಗಿ ಈ ಕಾರ್ಯ ನಡೆಯಲಿದೆ. ಕ್ಷೇತ್ರವ್ಯಾಪ್ತಿಯ ಕೆರೆಗಳೂ ಸೇರಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ ಕನಿಷ್ಠ 50 ಸಾವಿರ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಸಭೆ ಮಾಜಿ ಸದಸ್ಯ ಪ್ರೊ.ಎಂ.ವಿ.ರಾಜೀವ್‌ಗೌಡ, ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ಬಿಬಿಎಂಪಿ ಉಪಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್‌.ಜಿ.ಸ್ವಾಮಿ, ಉತ್ತರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಡಿ.ಸುರೇಶ್‌, ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಡಿ.ಬಿ.ಸುರೇಶ್‌ ಗೌಡ, ಪಳನಿ ವೆಂಕಟೇಶ್‌, ಕೆ.ಗೌರೀಶ್‌, ಎಚ್‌.ಎ.ಶಿವಕುಮಾರ್‌, ನವೀನ್‌ಕುಮಾರ್‌, ಡಿ.ಆರ್‌.ಮುನಿರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.