ADVERTISEMENT

ಟಿಡಿಆರ್‌ ನಿಯಮ ಸರಳೀಕರಣಗೊಳಿಸಲು ಕ್ರೆಡೈ ಮನವಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕ್ರೆಡೈ ಮನವಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 14:14 IST
Last Updated 4 ಸೆಪ್ಟೆಂಬರ್ 2024, 14:14 IST
ಅಮರ್ ಮೈಸೂರು
ಅಮರ್ ಮೈಸೂರು   

ಬೆಂಗಳೂರು: ‘ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್‌) ನಿಯಮಗಳ ಸರಳೀಕರಣ ಸೇರಿ ರಿಯಲ್‌ ಎಸ್ಟೇಟ್‌ ಅಭಿವೃದ್ಧಿಗೆ ಪೂರಕವಾದ ಸುಧಾರಣಾ ಕ್ರಮಗಳ ಜಾರಿಗೆ ಸರ್ಕಾರಕ್ಕೆ ಮನವಿಮಾಡಿದ್ದೇವೆ’ ಎಂದು ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಕ್ರೆಡೈ) ಅಧ್ಯಕ್ಷ ಅಮರ್‌ ಮೈಸೂರು ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ನಗರದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರವೂ ಬೆಳವಣಿಗೆಯಾಗುತ್ತಿದ್ದು, ಹಲವು ಸವಾಲುಗಳಿವೆ. ಈ ಸವಾಲು, ಸಮಸ್ಯೆಗಳಿಗೆ ಸ್ಪಂದಿಸಿ ಕ್ರಮಜರುಗಿಸಲು ಕ್ರೆಡೈ ನಿಯೋಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮನವಿ ಸಲ್ಲಿಸಿದೆ’ ಎಂದು ಹೇಳಿದರು.

‘ಪ್ರಸ್ತುತ ಜಾರಿಯಲ್ಲಿರುವ ಟಿಡಿಆರ್‌ ನಿಯಮಗಳಲ್ಲಿ ಗೊಂದಲಗಳಿವೆ. ಇದರಿಂದ ಯೋಜನಾ ಪ್ರಾಧಿಕಾರದವರು ಭೂ ಸ್ವಾಧೀನ ಮಾಡಿಕೊಂಡ ನಂತರ, ಭೂ ಮಾಲೀಕರು ಟಿಡಿಆರ್‌ ಪಡೆಯುವುದು ಕಷ್ಟವಾಗುತ್ತಿದೆ. ಈ ಕಾರಣದಿಂದ ನಿಯಮಗಳು ಹಾಗೂ ಪ್ರಕ್ರಿಯೆಯನ್ನು ಸರಳಗೊಳಿಸಬೇಕಿದೆ’ ಎಂದರು.

ADVERTISEMENT

‘ಯೋಜನೆಗೆ ಅನುಮೋದನೆ, ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯುವ ಪ್ರಕ್ರಿಯೆಗಳನ್ನು ಒಂದೇ ಸೂರಿನಡಿ ತರಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸುವುದು, ಮಾರ್ಗಸೂಚಿ ಮೌಲ್ಯದ ಆಧಾರದಲ್ಲಿ ವಿಧಿಸುವ ಅನುಮೋದನಾ‌ ಶುಲ್ಕ ಕಡಿಮೆಮಾಡಬೇಕು ಮತ್ತು ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಒಂದೇ ರೀತಿಯಲ್ಲಿ ಬಫರ್‌ ವಲಯಗಳನ್ನು ನಿಗದಿಪಡಿಸಬೇಕು. ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲಾಗುತ್ತಿರುವ ಆರ್ಥಿಕ ಹೊರೆ ತಗ್ಗಿಸುವುದಕ್ಕಾಗಿ ಜಂಟಿ ಅಭಿವೃದ್ಧಿ ಒಪ್ಪಂದ (ಜೆವಿಎ) ಮತ್ತು ಆಸ್ತಿ ಅಡಮಾನಕ್ಕೆ ಸಂಬಂಧಿಸಿದ ಕರಾರುಗಳ ನೋಂದಣಿ ಮೇಲೆ ವಿಧಿಸುವ ಮುದ್ರಾಂಕ ಶುಲ್ಕವನ್ನು ಕಡಿಮೆ ಮಾಡಬೇಕು‘ ಎಂದೂ ಆಗ್ರಹಿಸಿದರು.

‘ಈ ಎಲ್ಲ ಅಂಶಗಳನ್ನು ಉಪ ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರ ಈ ಸಲಹೆಗಳನ್ನು ಅನುಷ್ಠಾನಗೊಳಿಸಿ, ಸಮಸ್ಯೆಗಳನ್ನು ಪರಿಹರಿಸಿದರೆ ಬೆಂಗಳೂರು ನಗರದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿಸಹುದು. ಇದರಿಂದ ಡೆವಲಪರ್‌ಗಳಿಗೆ ಅನುಕೂಲ ಆಗುವುದರ ಜೊತೆಯಲ್ಲೂ ನಗರದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಅಮರ್‌ ತಿಳಿಸಿದರು.

ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲು ಮನವಿ ಸದ್ಯದ ಟಿಡಿಆರ್‌ ನಿಯಮಗಳಲ್ಲಿ ಗೊಂದಲ ಪರಿಹರಿಸಿ ಕರಾರುಗಳ ನೋಂದಣಿ ಮೇಲಿನ ಮುದ್ರಾಂಕ ಶುಲ್ಕ ತಗ್ಗಿಸಿ

‘ಅನಗತ್ಯ ಪ್ರಕ್ರಿಯೆಗಳನ್ನು ತೆಗೆದು ನಗರದಾದ್ಯಂತ ಏಕರೂಪದ ನಿಯಮಗಳನ್ನು ಜಾರಿಗೊಳಿಸಬೇಕು. ಇದರಿಂದ ರಿಯಲ್‌ ಎಸ್ಟೇಟ್ ಕ್ಷೇತ್ರದ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ’ ಎಂದು ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.