ಬೆಂಗಳೂರು: ನಿಷೇಧಿತ ಛಾಪಾ ಕಾಗದ ಮುದ್ರಿಸಿ, ಅದರ ಮೇಲೆ ನಕಲಿ ಸೀಲ್ ಹಾಕಿ ಮಾರುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
‘ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನ ಬಳಿಯ ಮಳಿಗೆಗಳಲ್ಲಿ ಗ್ರಾಹಕರ ಸೋಗಿನಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಲಾಯಿತು. ಶ್ರೀನಗರ ಎಸ್‌ಬಿಎಂ ಕಾಲೊನಿ ನಿವಾಸಿ ವಿಶ್ವನಾಥ್ (57), ಕಾರ್ತಿಕ್ (29), ವೆಂಕಟೇಶ್ (54) ಹಾಗೂ ಶಾಮರಾಜ್ (48) ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
‘ಟೈಪಿಂಗ್ ಕೆಲಸ ಹಾಗೂ ಅರ್ಜಿ ನಮೂನೆಗಳ ಮಾರಾಟಕ್ಕೆಂದು ಮಳಿಗೆ ಪಡೆದಿದ್ದ ಆರೋಪಿಗಳು, ನಿಷೇಧಿತ ಛಾಪಾ ಕಾಗದಗಳನ್ನು ಅಕ್ರಮವಾಗಿ ಮುದ್ರಿಸಿ ಮಾರಾಟ ಮಾಡುತ್ತಿದ್ದರು. ಇವರ ಬಳಿ ಕಾಗದ ಖರೀದಿ ಮಾಡುತ್ತಿದ್ದ ಗ್ರಾಹಕರು, ಹಳೇ ಆಸ್ತಿಗಳ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು’ ಎಂದು ತಿಳಿಸಿವೆ.
‘ಸರ್ಕಾರದ ಕಂದಾಯ ಇಲಾಖೆ ದಾಖಲೆಗಳನ್ನು ತಿದ್ದುಪಡಿ ಮಾಡಿಸಲು, ಸಾರ್ವಜನಿಕರ ಆಸ್ತಿ ಕಬಳಿಸಲು, ಸುಳ್ಳು ದಾವೆ ಹೂಡಲು ಹಳೇ ಛಾಪಾ ಕಾಗದಗಳು ಬಳಕೆಯಾಗುತ್ತಿದ್ದ ಮಾಹಿತಿ ಇದೆ. ಆರೋಪಿಗಳ ಬಳಿ ಕಾಗದ ಖರೀದಿ ಮಾಡಿರುವವರನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಹೇಳಿವೆ.
ಉಪನಿರ್ದೇಶಕ ಕಚೇರಿ ಸೀಲ್: ‘ಮೂರು ವರ್ಷಗಳಿಂದ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ₹ 1.50 ಮೌಲ್ಯದ 5 ಛಾಪಾ ಕಾಗದ, ₹ 2.10 ಮೌಲ್ಯದ 5 ಹಾಗೂ ₹ 10 ಮೌಲ್ಯದ 10 ಛಾಪಾ ಕಾಗದಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ.’
‘ಛಾಪಾ ಕಾಗದಗಳ ಮೇಲೆ, ವಿಧಾನಸೌಧದ ಖಜಾನೆ ಉಪನಿರ್ದೇಶಕರ ಕಚೇರಿ ಸೀಲ್ ಇದೆ. ಜೊತೆಗೆ, ಛಾಪಾ ಕಾಗದ ಮಾರಾಟಗಾರರ ಹೆಸರೂ ನಮೂದಿಸಲಾಗಿದೆ. ಅಶೋಕ ಚಕ್ರ ಹಾಗೂ ಭಾರತ ಸರ್ಕಾರ ಎಂಬ ಮುದ್ರೆಯೂ ಇದೆ’ ಎಂದೂ ಸಿಸಿಬಿ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.