ಬೆಂಗಳೂರು: ಡೇಟಿಂಗ್ ಆ್ಯಪ್ ಗೆಳತಿ ಜೊತೆಗಿನ ವಿಡಿಯೊ ಕರೆ ದೃಶ್ಯಗಳನ್ನು ಮುಂದಿಟ್ಟುಕೊಂಡು ಯುವಕರೊಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅರಮನೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಸಮಚ್ಚಯವೊಂದರ ನಿವಾಸಿಯಾದ 26 ವರ್ಷದ ಯುವಕ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಮೊಬೈಲ್ ನಂಬರ್ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ಯುವಕ, ಡೇಟಿಂಗ್ ಆ್ಯಪ್‌ವೊಂದರಲ್ಲಿ ಖಾತೆ ತೆರೆದಿದ್ದ. ಅದೇ ಆ್ಯಪ್‌ನಲ್ಲಿ ಯುವತಿಯೊಬ್ಬರ ಪರಿಚಯವಾಗಿತ್ತು. ನಂತರ, ಅವರಿಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು. ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ವಾಟ್ಸ್‌ಆ್ಯಪ್‌ನಲ್ಲೂ ವಿಡಿಯೊ ಕರೆ ಮಾಡುತ್ತಿದ್ದರು.’
‘ವಿಡಿಯೊ ಕರೆ ಚಿತ್ರೀಕರಿಸಿಕೊಂಡಿರುವ ಆರೋಪಿಗಳು, ದೂರುದಾರರಿಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸಿದ್ದರು. ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದರು. ಹೆದರಿದ್ದ ಯುವಕ, ₹ 30 ಸಾವಿರ ನೀಡಿದ್ದರು. ಪುನಃ ಆರೋಪಿಗಳು ಹಣಕ್ಕೆ ಒತ್ತಾಯಿಸುತ್ತಿದ್ದಾರೆ. ಬೇಸತ್ತ ಯುವಕ ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಆ್ಯಪ್‌ನಲ್ಲಿ ನಕಲಿ ಖಾತೆ ತೆರೆದಿದ್ದ ಯುವತಿಯೇ ತನ್ನ ಸಹಚರರ ಮೂಲಕ ಕೃತ್ಯ ಮಾಡಿಸಿರುವ ಅನುಮಾನವಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.