ADVERTISEMENT

ಹೆಣ್ಣು ಭ್ರೂಣ ಹತ್ಯೆ: ಮತ್ತೊಬ್ಬ ಶುಶ್ರೂಷಕಿ ಬಂಧನ; ಸಿಐಡಿ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 14:44 IST
Last Updated 4 ಡಿಸೆಂಬರ್ 2023, 14:44 IST
ಉಷಾರಾಣಿ
ಉಷಾರಾಣಿ   

ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಶುಶ್ರೂಷಕಿ ಉಷಾರಾಣಿ (35) ಅವರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ರಾಜ್ಯದಲ್ಲಿ ಮತ್ತೊಂದು ತಂಡ ಸಕ್ರಿಯವಾಗಿರುವ ಸಂಗತಿ ತನಿಖೆಯಿಂದ ಪತ್ತೆಯಾಗಿದೆ.

‘ಮೈಸೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉಷಾರಾಣಿ, ಜಾಲದ ಪ್ರಮುಖ ಆರೋಪಿ ಡಾ. ಚಂದನ್ ಬಲ್ಲಾಳ್ ಹಾಗೂ ಚೆನ್ನೈನ ವೈದ್ಯರೊಬ್ಬರ ತಂಡದಲ್ಲಿದ್ದರು. ತಿಂಗಳಿಗೆ 5 ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದರು. ಇದಕ್ಕಾಗಿ ಪ್ರತಿಯೊಬ್ಬರಿಂದ ₹5 ಸಾವಿರ ಪಡೆಯುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಉಷಾರಾಣಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಪ್ರಕರಣದಲ್ಲಿ ಅವರ ಪಾತ್ರವಿಲ್ಲವೆಂಬುದು ಸದ್ಯಕ್ಕೆ ಗೊತ್ತಾಗಿದೆ. ವಿಚಾರಣೆ ನಡೆಸಿದ ನಂತರ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಕ್ಯಾಟರಿಂಗ್ ಗುತ್ತಿಗೆದಾರ–ಲ್ಯಾಬ್ ಟೆಕ್ನೀಷಿಯನ್ ತಂಡ: ‘ಆರೋಪಿ ಶಿವನಂಜೇಗೌಡ ಹಾಗೂ ಇತರರು ಒಂದು ತಂಡ ಕಟ್ಟಿಕೊಂಡು ಗರ್ಭಿಣಿಯರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಭ್ರೂಣ ಹತ್ಯೆ ಮಾಡಿಸುತ್ತಿದ್ದರು. ಮತ್ತೊಂದು ಪ್ರತ್ಯೇಕ ತಂಡ ಕಟ್ಟಿದ್ದ ಕ್ಯಾಟರಿಂಗ್ ಗುತ್ತಿಗೆದಾರ ಪುಟ್ಟರಾಜು ಹಾಗೂ ಲ್ಯಾಬ್ ಟೆಕ್ನೀಷಿಯನ್ ಧನಂಜಯ್ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು. ಇವರಿಬ್ಬರು ಈಗಾಗಲೇ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪುಟ್ಟರಾಜುನನ್ನು ವಿಚಾರಣೆ ನಡೆಸಲಾಗಿತ್ತು. ಇದೇ ಸಂದರ್ಭದಲ್ಲಿ ಈತ, ಉಷಾರಾಣಿ ಹೆಸರು ಬಾಯ್ಬಿಟ್ಟಿದ್ದ. ಕೆಲ ಪುರಾವೆಗಳನ್ನು ಆಧರಿಸಿ ಉಷಾರಾಣಿ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ತಿಳಿಸಿವೆ.

ಸುಳ್ಳು ಹೇಳಿಸಿ ಆಸ್ಪತ್ರೆಗೆ ದಾಖಲು: ‘ಪುಟ್ಟರಾಜು ಹಾಗೂ ಧನಂಜಯ್ ಗರ್ಭಿಣಿಯರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸುತ್ತಿದ್ದರು. ಹೆಣ್ಣು ಎಂಬುದು ಗೊತ್ತಾಗುತ್ತಿದ್ದಂತೆ ಭ್ರೂಣ ಹತ್ಯೆ ಮಾಡಲು ಉಷಾರಾಣಿ ಬಳಿ ಕಳುಹಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಉಷಾರಾಣಿ ಗರ್ಭಿಣಿಯರನ್ನು ಆಸ್ಪತ್ರೆ ವೈದ್ಯರ ಬಳಿ ಕರೆದೊಯ್ಯುತ್ತಿದ್ದರು. ಸುಳ್ಳು ಹೇಳಿಸಿ ಆಸ್ಪತ್ರೆಗೆ ದಾಖಲು ಮಾಡಿಸಿಕೊಳ್ಳುತ್ತಿದ್ದರು. ನಂತರ, ಗರ್ಭಪಾತ ಮಾಡಿ ಕಳುಹಿಸುತ್ತಿದ್ದರು’ ಎಂದು ತಿಳಿಸಿವೆ.

ಸಿಐಡಿ ತನಿಖೆ ಆರಂಭ: ಪ್ರಕರಣದಲ್ಲಿ ಇದುವರೆಗೂ 11 ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣದ ಕಡತಗಳನ್ನು ಸಿಐಡಿ ಅಧಿಕಾರಿಗಳು ಪಡೆದುಕೊಂಡಿದ್ದು, ಅಧಿಕೃತವಾಗಿ ತನಿಖೆ ಆರಂಭಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.