ಬೆಂಗಳೂರು: ಗಲಾಟೆ ಮಾಡಿಕೊಳ್ಳದಂತೆ ಬುದ್ಧಿವಾದ ಹೇಳಿದ್ದ ಇಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲನಗರ ನಿವಾಸಿಗಳಾದ ವಿಷ್ಣು (30) ಮತ್ತು ವಿಶ್ವ (32) ಬಂಧಿತರು.
ಆರೋಪಿಗಳು ಅ.28ರಂದು ತಡರಾತ್ರಿ 12.30ರ ಸುಮಾರಿಗೆ ಹೇಮಂತ್ ಮತ್ತು ಶ್ರೀನಿವಾಸ್ ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹಲ್ಲೆಗೆ ಒಳಗಾದ ಹೇಮಂತ್ ಮತ್ತು ಶ್ರೀನಿವಾಸ್ ಕೂಲಿ ಕೆಲಸ ಮಾಡುತ್ತಿದ್ದರು. ಅ.28ರಂದು ರಾತ್ರಿ 12.30ರ ಸುಮಾರಿಗೆ ರಾಜಗೋಪಾಲನಗರ ಮುಖ್ಯರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ನಡೆದು ತೆರಳುತ್ತಿದ್ದರು. ಮಾರ್ಗದಲ್ಲಿ ಇಬ್ಬರೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಆರೋಪಿಗಳಾದ ವಿಷ್ಣು ಮತ್ತು ವಿಶ್ವ ಅವರು ಹೇಮಂತ್ ಮತ್ತು ಶ್ರೀನಿವಾಸ್ ಅವರ ಜಗಳ ಬಿಡಿಸಿ ಬುದ್ಧಿಮಾತು ಹೇಳಿದ್ದರು.
ಇದರಿಂದ ಆಕ್ರೋಶಗೊಂಡ ಇಬ್ಬರು, ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಕೋಪಗೊಂಡ ಆರೋಪಿಗಳಾದ ವಿಷ್ಣು ಹಾಗೂ ವಿಶ್ವ ಅವರು ಹೇಮಂತ್ ಹೊಟ್ಟೆಗೆ ಮತ್ತು ಶ್ರೀನಿವಾಸ್ ಅವರ ಕಾಲಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿ ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.