ADVERTISEMENT

₹ 1.20 ಕೋಟಿ ಮೌಲ್ಯದ 9 ಕಾರುಗಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 20:17 IST
Last Updated 2 ಸೆಪ್ಟೆಂಬರ್ 2022, 20:17 IST

ಬೆಂಗಳೂರು: ಹೊರ ರಾಜ್ಯಗಳಲ್ಲಿ ಕದ್ದ ಕಾರುಗಳನ್ನು ನಗರಕ್ಕೆ ತಂದು ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪಾದರಾಯನಪುರದ ಅಯಾಜ್‌ ಪಾಷಾ ಅಲಿಯಾಸ್ ಮೌಲಾ (33) ಹಾಗೂ ಕಸ್ತೂರಬಾ ನಗರದ ಮತೀನ್‌ವುದ್ದೀನ್ ಅಲಿಯಾಸ್ ಮತೀನ್ (32) ಬಂಧಿತರು. ಇವರಿಂದ ₹ 1.20 ಕೋಟಿ ಮೌಲ್ಯದ 9 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೃತ್ಯದಲ್ಲಿ ಭಾಗಿಯಾಗಿದ್ದ ಸೈಯದ್ ಸಮೀರ್, ಡೆಲ್ಲಿ ಇಮ್ರಾನ್, ತನ್ನು ಅಲಿಯಾಸ್ ತನ್ವೀರ್ ಹಾಗೂ ಯಾರಬ್ ಎಂಬುವರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ತನಿಖೆ ಮುಂದುವರಿಸಿದೆ’ ಎಂದೂ ಪೊಲೀಸರು ತಿಳಿಸಿದರು.

ADVERTISEMENT

‘ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳಿಗೆ ಆಗಾಗ ಆರೋಪಿಗಳು ಹೋಗುತ್ತಿದ್ದರು. ಐಷಾರಾಮಿ ಕಾರುಗಳನ್ನು ಗುರುತಿಸಿ ಕಳ್ಳತನ ಮಾಡಿಕೊಂಡು ಬೆಂಗಳೂರಿಗೆ ತರುತ್ತಿದ್ದರು.’

‘ಕದ್ದ ಕಾರುಗಳ ನೋಂದಣಿ ಸಂಖ್ಯೆ ಬದಲಿಸುತ್ತಿದ್ದ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಅಂಥ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. ಇತ್ತೀಚೆಗೆ ಆರೋಪಿಗಳ ಕೃತ್ಯದ ಬಗ್ಗೆ ಮಾಹಿತಿ ಬಂದಿತ್ತು. ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.