ADVERTISEMENT

ವರದಿಗಾರ, ಗೃಹರಕ್ಷಕ ಸಿಬ್ಬಂದಿ ಸೇರಿ ಐವರ ಬಂಧನ

ಸ್ಪಾ ಮಾಲೀಕರ ಸುಲಿಗೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 19:40 IST
Last Updated 2 ಮಾರ್ಚ್ 2022, 19:40 IST
   

ಬೆಂಗಳೂರು: ಸ್ಪಾ ಮಾಲೀಕರೊಬ್ಬರನ್ನು ಸುಲಿಗೆ ಮಾಡಿರುವ ಆರೋಪದಡಿ ಪತ್ರಿಕೆಯೊಂದರ ವರದಿಗಾರ, ಗೃಹರಕ್ಷಕ ದಳದ ಸಿಬ್ಬಂದಿ ಸೇರಿ ಐದು ಮಂದಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕಸ್ಟಮ್ ಆ್ಯಂಡ್‌ ಎಕ್ಸೈಸ್‌’ ಪತ್ರಿಕೆಯ ವರದಿಗಾರ ಎನ್ನಲಾಗಿರುವ ಸೈಯದ್‌ ಖಲೀಂ (28), ಗೃಹರಕ್ಷ‌ಕ ದಳದ ಸಿಬ್ಬಂದಿಯಾಗಿರುವ ಸಂಪಂಗಿರಾಮ್ (31), ಆಶೀಫ್‌ (27), ಆನಂದ್‌ರಾಜ್ (30), ವಿನಾಯಕ್ (28) ಬಂಧಿತರು.

‘ಆರೋಪಿಗಳು ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಜಯಂತಿ ನಗರ ಮುಖ್ಯರಸ್ತೆಯಲ್ಲಿರುವ ಸ್ಪಾವೊಂದರ ಮಾಲೀಕರ ಬಳಿ ತೆರಳಿದ್ದರು. ಗುರುತಿನ ಚೀಟಿ ತೋರಿಸಿ ‘ವರದಿಗಾರ’ ಎಂದು ಪರಿಚಯಿಸಿಕೊಂಡಿದ್ದ ಸೈಯದ್‌ ಖಲೀಂ, ಅಕ್ರಮವಾಗಿ ಮಸಾಜ್ ಪಾರ್ಲರ್‌ ನಡೆಸುತ್ತಿರುವ ದೂರು ಬಂದಿದ್ದು, ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸುತ್ತೇವೆ ಎಂದು ಬೆದರಿಕೆ ಹಾಕಿದ್ದ. ಬಳಿಕ ₹60 ಸಾವಿರ ನಗದು ಹಾಗೂ ಆನ್‌ಲೈನ್‌ ಪಾವತಿ ಮೂಲಕ₹1 ಲಕ್ಷ ಅನ್ನು ಪಡೆದಿದ್ದರು. ಈ ಬಗ್ಗೆ ಸ್ಪಾ ಮಾಲೀಕ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಸೈಯದ್‌ ಖಲೀಂ ಹಾಗೂ ಆಶೀಫ್‌ ಇಬ್ಬರೂ ಹಣ ಸಂಪಾದಿಸುವ ದುರುದ್ದೇಶದಿಂದ ಈ ಕೃತ್ಯಕ್ಕೆ ಮುಂದಾಗಿದ್ದು, ಆಶೀಫ್ ತನ್ನ ಸಹೋದ್ಯೋಗಿಗಳನ್ನು ಸೇರಿಸಿಕೊಂಡಿದ್ದ. ಇವರೆಲ್ಲ ಕೆ.ಜಿ.ಹಳ್ಳಿ, ಹೆಣ್ಣೂರು ಹಾಗೂ ಗೋವಿಂದಪುರ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರು. ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.