ಬೆಂಗಳೂರು: ‘ಪೇಟಿಎಂ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು, ಕ್ಯಾಶ್‌ಬ್ಯಾಕ್ ಕೊಡಿಸುವುದಾಗಿ ಜನರಿಗೆ ವಂಚಿಸುತ್ತಿದ್ದ ಆರೋಪದಡಿ ಬೆಟ್ಟಹಲಸೂಸು ನಿವಾಸಿ ದೀಪನ್ ಚಕ್ರವರ್ತಿ (24) ಎಂಬವನನ್ನು ಈಶಾನ್ಯ ವಿಭಾಗದ ಸೆನ್ (ಸಿಇಎನ್) ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ಪ್ರತ್ಯೇಕ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿ, ಪೇಟಿಎಂ ಪ್ರತಿನಿಧಿ ರಾಜೇಶ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡರೆ ಕ್ಯಾಶ್‌ಬ್ಯಾಕ್ ಸಿಗಲಿದೆ ಎಂದು ನಂಬಿಸಿ ಮುಂಗಡವಾಗಿ ಹಣ ಪಡೆದು ವಂಚಿಸುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
‘ಇದೇ ರೀತಿ, ವ್ಯಕ್ತಿಯೊಬ್ಬರ ಆಧಾರ್ ಮತ್ತು ಪಾನ್‌ಕಾರ್ಡ್ ಸಂಖ್ಯೆಗಳ ಮಾಹಿತಿ ಪಡೆದು ಖಾತೆಯಿಂದ ₹19 ಸಾವಿರ ಎಗರಿಸಿದ್ದ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿತ್ತು.ಈತ ಮೊದಲು ಪೇಟಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲ ಸಂದರ್ಭಗಳಲ್ಲಿ ಪೇಟಿಎಂ ಬಗ್ಗೆ ಅರಿವು ಮೂಡಿಸಿ ಆ್ಯಪ್ ಇನ್‌ಸ್ಟಾಲ್ ಮಾಡಿ,ಈತನೇ ಪಾಸ್‌ವರ್ಡ್ ರೂಪಿಸುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
‘ವರ್ಷದ ಹಿಂದೆ ಕೆಲಸ ತೊರೆದಿದ್ದ. ನಂತರ, ತಾನು ಆ್ಯಪ್ ಇನ್‌ಸ್ಟಾಲ್ ಮಾಡಿಸಿದ್ದ ಗ್ರಾಹಕರಿಗೆ ಕರೆ ಮಾಡಿ, ಕ್ಯಾಶ್‌ಬ್ಯಾಕ್ ಸೌಲಭ್ಯಕ್ಕೆ ಆ್ಯಪ್‌ನಲ್ಲಿ ಕನಿಷ್ಠ ಮೊತ್ತ ಇರಲೇಬೇಕು ಎಂದು ನಂಬಿಸುತ್ತಿದ್ದ. ತನಗೆ ತಿಳಿದಿದ್ದ ಪಾಸ್‌ವರ್ಡ್ ಬಳಸಿ ಹಣ ವರ್ಗಾಯಿಸಿಕೊಳ್ಳುತ್ತಿದ್ದ’ ಎಂದರು.
‘ಆರೋಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಸಿಮ್ ಕಾರ್ಡ್ ಹಾಗೂ ಒಂದು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.