ಬೆಂಗಳೂರು: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವತಿ ಜೊತೆಗಿನ ಸಲುಗೆಯ ಫೋಟೊ–ವಿಡಿಯೊ ಇಟ್ಟುಕೊಂಡು ಐಪಿಎಸ್ ಅಧಿಕಾರಿ ಹೆಸರಿನಲ್ಲಿ ಬ್ಲ್ಯಾಕ್ಮೇಲ್ ಮಾಡಿ ₹ 15.90 ಲಕ್ಷ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ತಿಲಕ್ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಚಾಮರಾಜಪೇಟೆ ನಿವಾಸಿಯಾದ 20 ವರ್ಷದ ಯುವಕ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಸುನೀಲ್, ಹೇಮಂತ್ ಹಾಗೂ ಪ್ರವೀಣ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಚಾಮರಾಜಪೇಟೆ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿಗಳು, ದೂರುದಾರರ ಸ್ನೇಹಿತರು. ದೂರುದಾರರು ನೀಡಿದ್ದ ಫೋಟೊ ಹಾಗೂ ವಿಡಿಯೊವನ್ನು ದುರ್ಬಳಕೆ ಮಾಡಿಕೊಂಡಿದ್ದ ಸ್ನೇಹಿತರು, ₹ 15.90 ಲಕ್ಷ ನಗದು ಹಾಗೂ 99 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಈ ಸಂಗತಿ ದೂರಿನಲ್ಲಿದೆ’ ಎಂದು ಮೂಲಗಳು ತಿಳಿಸಿವೆ.
‘ಚಾಂದಿನಿ’ ಖಾತೆಯಿಂದ ರಿಕ್ವೆಸ್ಟ್: ‘ದೂರುದಾರ ಯುವಕ, ಇನ್ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದಾರೆ. ಚಾಂದಿನಿ ಎಂಬ ಯುವತಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ದೂರುದಾರ ಸ್ವೀಕರಿಸಿದ್ದರು. ನಂತರ, ಇಬ್ಬರು ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದಿನ ಕಳೆದಂತೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ವಿಡಿಯೊ ಕರೆ ಮಾಡಲಾರಂಭಿಸಿದ್ದ ಯುವತಿ, ಲೈಂಗಿಕವಾಗಿ ಪ್ರಚೋದಿಸುವ ರೀತಿಯಲ್ಲಿ ಮಾತನಾಡುತ್ತಿದ್ದರು. ದೂರುದಾರ ಯುವಕ, ಯುವತಿ ಜೊತೆ ಮಾತನಾಡುತ್ತಲೇ ಬಟ್ಟೆ ಬಿಚ್ಚಿ ಬೆತ್ತಲಾಗುತ್ತಿದ್ದರು. ಇದೇ ಸಂದರ್ಭದಲ್ಲೇ ಯುವತಿ, ದೂರುದಾರ ಯುವಕನ ಬೆತ್ತಲೆ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಟ್ಟುಕೊಂಡಿದ್ದರು. ಅವುಗಳನ್ನು ದೂರುದಾರರಿಗೂ ಕಳುಹಿಸಿದ್ದರು’ ಎಂದು ತಿಳಿಸಿವೆ.
‘ನೇರವಾಗಿ ಭೇಟಿಯಾಗಿ ಖಾಸಗಿ ಕ್ಷಣ ಕಳೆಯುವಂತೆ ಯುವತಿ ಒತ್ತಾಯಿಸಿದ್ದರು. ಅದಕ್ಕೆ ಯುವಕ ಒಪ್ಪಿರಲಿಲ್ಲ. ಸಿಟ್ಟಾದ ಯುವತಿ, ಫೋಟೊ–ವಿಡಿಯೊ ಇರುವುದಾಗಿ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದರು. ಹೆದರಿದ್ದ ದೂರುದಾರ ಯುವಕ, ಯುವತಿಯನ್ನು ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದರು. ಇದೇ ಸಂಗತಿಯನ್ನು ದೂರುದಾರ ಯುವಕ, ಆರೋಪಿಗಳಾದ ಸ್ನೇಹಿತರಿಗೆ ತಿಳಿಸಿದ್ದರು. ಜೊತೆಗೆ, ಯುವತಿ ಜೊತೆಗಿನ ಸಲುಗೆ ವಿಡಿಯೊ– ಫೋಟೊಗಳನ್ನೂ ಸ್ನೇಹಿತರಿಗೆ ಕಳುಹಿಸಿದ್ದರು’ ಎಂದು ಮೂಲಗಳು ಹೇಳಿವೆ.
ಸಂಚು ರೂಪಿಸಿ ಸುಲಿಗೆ ಮಾಡಿದ ಸ್ನೇಹಿತರು: ‘ಫೋಟೊ–ವಿಡಿಯೊಗಳನ್ನು ತಮ್ಮಲ್ಲೇ ಹಂಚಿಕೊಂಡಿದ್ದ ಆರೋಪಿಗಳು, ಅವುಗಳನ್ನು ಇಟ್ಟುಕೊಂಡು ಸ್ನೇಹಿತನಾದ ದೂರುದಾರರನ್ನೇ ಬ್ಲ್ಯಾಕ್ಮೇಲ್ ಮಾಡಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ದೂರುದಾರರಿಗೆ ಕರೆ ಮಾಡಿದ್ದ ಸ್ನೇಹಿತರು, ‘ನನಗೆ ಪರಿಚಯವಿರುವ ಐಪಿಎಸ್ ಅಧಿಕಾರಿಯೊಬ್ಬರು ಕರೆ ಮಾಡಿದ್ದರು. ನಿನ್ನ ಬೆತ್ತಲೆ ಫೋಟೊ–ವಿಡಿಯೊ ಸಮೇತ ಯುವತಿಯೊಬ್ಬರು ದೂರು ನೀಡಿರುವುದಾಗಿ ಅವರು ಹೇಳುತ್ತಿದ್ದಾರೆ. ಹಣ ನೀಡಿದರೆ ಸಂಧಾನ ಮಾಡಿಸುವುದಾಗಿಯೂ ತಿಳಿಸಿದ್ದಾರೆ’ ಎಂದಿದ್ದರು. ಅದರಿಂದ ಹೆದರಿದ್ದ ದೂರುದಾರ, 99 ಗ್ರಾಂ ಚಿನ್ನದ ಸರ ಕೊಟ್ಟಿದ್ದರು. ಅದನ್ನು ಮಾರಿ ಸಂಧಾನ ಮಾಡಿಸುವಂತೆ ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ವಿವರಿಸಿವೆ.
‘99 ಗ್ರಾಂ ಚಿನ್ನ ಸಾಕಾಗುವುದಿಲ್ಲವೆಂದು ಹೇಳಿದ್ದ ಆರೋಪಿಗಳು, ಐಪಿಎಸ್ ಅಧಿಕಾರಿ ಹಾಗೂ ಸಿಸಿಬಿ ಪೊಲೀಸರ ಹೆಸರು ಹೇಳಿ ಹಂತ ಹಂತವಾಗಿ ₹ 15.90 ಲಕ್ಷ ಸುಲಿಗೆ ಮಾಡಿದ್ದರು. ಇದಾದ ನಂತರ ಪುನಃ ಹಣ ಕೇಳಿದ್ದರು. ಬೇಸತ್ತ ಸಂತ್ರಸ್ತ, ಠಾಣೆಗೆ ಬಂದು ಸ್ನೇಹಿತರ ವಿರುದ್ಧ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.