ಬೆಂಗಳೂರು: ಮಲ್ಲೇಶ್ವರದಲ್ಲಿ ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡಿರುವ ಸರ್ಕಾರದ ಜಮೀನಿಗೆ ಪ್ರತಿಯಾಗಿ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣ ಪತ್ರ (ಟಿಡಿಆರ್‌ಸಿ) ವಿತರಿಸುವ ಮೂಲಕಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇನ್ನೊಂದು ಎಫ್ಐಆರ್ ದಾಖಲಿಸಿದೆ.
ಟಿಡಿಆರ್‌ಸಿ ವಂಚನೆ ಕುರಿತು ತನಿಖೆ ನಡೆಸುತ್ತಿರುವ ಎಸಿಬಿ, ಬಿಬಿಎಂಪಿಯ ಕೆಲವು ಅಧಿಕಾರಿಗಳ ವಿರುದ್ಧ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಕಳೆದ ಆಗಸ್ಟ್‌ನಲ್ಲಿ ಎಫ್ಐಆರ್ ದಾಖಲಿಸಿರುವುದು ತಡವಾಗಿ ಬಯಲಿಗೆ ಬಂದಿದೆ. ಎಸಿಬಿ ಹಿಂದಿನ ಡಿವೈಎಸ್‌ಪಿ ಕೆ.ಪಿ. ರವಿಕುಮಾರ್ ದಾಖಲಿಸಿರುವ ಎಫ್ಐಆರ್‌ನಲ್ಲಿ ಕಂಪನಿಯ ಪ್ರತಿನಿಧಿಗಳನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದ ಬಳಿಕ ಅಧಿಕಾರಿಗಳ ವಿರುದ್ಧ ಈ ಎಫ್‌ಐಆರ್ ದಾಖಲಾಗಿದ್ದು,ವಂಚನೆ, ಕ್ರಿಮಿನಲ್ ಪಿತೂರಿ, ಅಧಿಕಾರ ದುರ್ಬಳಕೆ ಮತ್ತು ಅಕ್ರಮ ಲಾಭ ಸೇರಿದಂತೆ ಐಪಿಸಿಯ ವಿವಿಧ ಕಲಂಗಳಡಿ ಆರೋಪ ಮಾಡಲಾಗಿದೆ.
ನಷ್ಟದಲ್ಲಿದ್ದ ಕಂಪನಿಯೊಂದರ ಜಾಗವನ್ನು ಸರ್ಕಾರದ ಮತ್ತೊಂದು ನಿಗಮಕ್ಕೆ ಹಸ್ತಾಂತರಿಸಲಾಗಿತ್ತು. ಆನಂತರ ಈ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡಲಾಯಿತು. ಇದರಲ್ಲಿ 10 ಸಾವಿರಕ್ಕೂ ಅಧಿಕ ಚ.ಮೀ ಅನ್ನುರಸ್ತೆ ವಿಸ್ತರಣೆಗಾಗಿ ಬಿಬಿಎಂಪಿ
ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಒಂದೂವರೆ ಪಟ್ಟು ಟಿಡಿಆರ್‌ಸಿ ವಿತರಿಸಿರುವುದಕ್ಕೆ ಈ ಪ್ರಕರಣ ಸಂಬಂಧಿಸಿದೆ. (ಕಂಪನಿ ಈ ಟಿಡಿಆರ್‌ಸಿ ಅನ್ನು ಬೇರೆ ಕಡೆ ನಿರ್ಮಿಸುವ ಕಟ್ಟಡಕ್ಕೆ ಬಳಸಿಕೊಳ್ಳಬಹುದಾಗಿದೆ).
ಬಿಬಿಎಂಪಿಯಿಂದ ವಿತರಿಸಲಾದ ಟಿಡಿಆರ್‌ಸಿಯನ್ನುಸರ್ಕಾರದ ಅಧಿಸೂಚನೆ ಅನ್ವಯ ಬಿಡಿಎ ಮರು ಪರಿಶೀಲಿಸಿದ ಸಮಯದಲ್ಲಿ ಅಕ್ರಮ ಬಯಲಿಗೆ ಬಂದಿದೆ. ಈ ಜಾಗಕ್ಕೆ ಸಂಬಂಧಿಸಿದ ನಕ್ಷೆ ದಾಖಲೆಯಲ್ಲಿ ಇರಲಿಲ್ಲ. ಬಳಿಕ ಕಂಪನಿ ಪ್ರತಿನಿಧಿಗಳ ಸಮ್ಮುಖದಲ್ಲಿ ಜಾಗ ಅಳೆದು, ಸಿಟಿ ಸರ್ವೆಯ ದಾಖಲೆಗಳ ಸಹಾಯದಿಂದ ಇನ್ನೊಂದು ನಕ್ಷೆ ಸಿದ್ಧಪಡಿಸಲಾಗಿತ್ತು. ಇದರಿಂದಾಗಿ, ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಜಾಗಕ್ಕಿಂತಲೂ ಹೆಚ್ಚಿನ ಜಾಗಕ್ಕೆ ಟಿಡಿಆರ್‌ಸಿ ನೀಡುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಯಿಂದ ವಶಪಡಿಸಿಕೊಂಡ ಜಾಗಕ್ಕೆ ಮಾತ್ರ ಟಿಡಿಆರ್‌ಸಿ ನೀಡಬಹುದು ಎಂದು ಬಿಡಿಎ ಅಧಿಕಾರಿಗಳು ಹಾಕಿದ್ದ ಟಿಪ್ಪಣಿಯನ್ನು ಕಡೆಗಣಿಸಿ ಟಿಡಿಆರ್‌ಸಿ ವಿತರಿಸಿದ್ದಾರೆ ಎಂದೂ ದೂರಲಾಗಿದೆ.
ನಗರದಲ್ಲಿ ರಸ್ತೆಗಳ ವಿಸ್ತರಣೆಗಾಗಿ ವಶಪಡಿಸಿಕೊಂಡ ಜಾಗಕ್ಕೆ ಪ್ರತಿಯಾಗಿ ವಿತರಿಸುವ ಟಿಡಿಆರ್‌ಸಿ ವ್ಯವಹಾರದ ಹಿಂದೆ ಪ್ರಭಾವಿ ಕುಳಗಳು ಭಾಗಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಕೈ ಬದಲಾಯಿಸಿದೆ ಎಂದು ಎಸಿಬಿ ಮೂಲಗಳು ಹೇಳಿವೆ. ಈ ಅಕ್ರಮ ಸಂಬಂಧ ಬಿಬಿಎಂಪಿಯ ಕೆಲವು ಅಧಿಕಾರಿಗಳು, ಮಧ್ಯವರ್ತಿಗಳು ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.