ಬೆಂಗಳೂರು: 'ಸಿನಿಮಾ, ಸಾಹಿತ್ಯ, ರಂಗಭೂಮಿ ಕೇವಲ ಮನರಂಜನೆಯ ಸಾಧನಗಳಲ್ಲ. ಅವುಗಳು ವಿಮರ್ಶಾತ್ಮಕ ಒಳನೋಟವನ್ನು ಕಟ್ಟಿಕೊಡುತ್ತವೆ. ಆದರೆ, ಈಗ ಯಾವುದನ್ನೂ ವಿಮರ್ಶಾತ್ಮಕವಾಗಿ ಮಾಡಲಾಗದ ದುರ್ಬರ ಸ್ಥಿತಿ ದೇಶದಲ್ಲಿದೆ’ ಎಂದು ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಕಳವಳ ವ್ಯಕ್ತಪಡಿಸಿದರು.
ಬರಗೂರು ಪ್ರತಿಷ್ಠಾನವು ಗುರುವಾರ ಏರ್ಪಡಿಸಿದ್ದ 'ನಾಡೋಜ ಬರಗೂರು ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಸಿನಿಮಾ ನಿರ್ದೇಶಕರಲ್ಲೂ ದೊಡ್ಡ ಮಟ್ಟದ ಹೆದರಿಕೆ ಹುಟ್ಟಿಕೊಂಡಿದೆ. ನಿರ್ದೇಶಕನಾಗಿ ನಾನು ಸೋಲುತ್ತಿದ್ದೇನೋ ಅಥವಾ ಪ್ರೇಕ್ಷಕ ಸೋಲುತ್ತಿದ್ದಾನೋ ತಿಳಿಯದ ಗೊಂದಲದಲ್ಲಿ ನಾನಿದ್ದೇನೆ. ಈ ಭಯದಲ್ಲಿ ಕೆಲವೊಮ್ಮೆ ಸಿನಿಮಾ ಮಾಡುವುದೇ ಬೇಡ ಎಂದೂ ಅನಿಸಿಬಿಡುತ್ತದೆ. ಆದರೆ, ಈ ಪ್ರಶಸ್ತಿ ನನಗೆ ಹೊಸ ಎದೆಗಾರಿಕೆಯನ್ನು ನೀಡಿದೆ’ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್, ‘ಟೀಕೆಯನ್ನು ಹತ್ತಿಕ್ಕಲು ದೇಶದ್ರೋಹ ಕಾಯ್ದೆಯನ್ನು ದುರ್ಬಳಕೆ ಮಾಡಲಾಗುತ್ತಿದೆ. ಪ್ರತಿಭಟಿಸುವವರ ವಿರುದ್ಧ ಯುಎಪಿ ಕಾಯ್ದೆಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಿದರೆ ತಮ್ಮನ್ನು ಜೈಲಿಗೆ ಹಾಕಬಹುದು, ಎನ್‌ಕೌಂಟರ್ ಮಾಡಬಹುದು ಎಂಬ ಭಯವೂ ಜನರನ್ನು ಕಾಡುತ್ತಿದೆ’ ಎಂದರು.
ಸಿನಿಮಾ ಕ್ಷೇತ್ರದ ಸಾಧನೆಗಾಗಿ ಗಾಯಕಿ ಬಿ.ಕೆ.ಸುಮಿತ್ರಾ ಅವರಿಗೆ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಲೇಖಕ ಚಂದ್ರಕಾಂತ ಪೋಕಳೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಆಯ್ಕೆಯಾಗಿದ್ದ ಸಾರಾ ಅಬೂಬಕರ್ ಸಮಾರಂಭಕ್ಕೆ ಗೈರಾಗಿದ್ದರು. ಪ್ರಶಸ್ತಿಯು ತಲಾ ₹ 25 ಸಾವಿರ ನಗದನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.