ADVERTISEMENT

ಸಿಎಸ್‌ಆರ್ ದೇಣಿಗೆ ವಂಚನೆ ಜಾಲ: ನಾಲ್ವರು ಬಂಧನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 15:11 IST
Last Updated 5 ಏಪ್ರಿಲ್ 2024, 15:11 IST
ಸುನೀತಾ
ಸುನೀತಾ   

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳಿಂದ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ದೇಣಿಗೆ ಕೊಡಿಸುವುದಾಗಿ ಹೇಳಿ ಕಮಿಷನ್ ಪಡೆದು ವಂಚಿಸುತ್ತಿದ್ದ ಆರೋಪದಡಿ ಮಹಿಳೆ ಸೇರಿ ನಾಲ್ವರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಸುನೀತಾ (36), ಜಯಕುಮಾರ್ (42), ಗುಜರಾತ್‌ನ ರಾಜೇಂದ್ರ ಹೆಗ್ಡೆ ಹಾಗೂ ಬೆಂಗಳೂರಿನ ಉತ್ತರಹಳ್ಳಿಯ ಜತೀನ್ ಅಗರ್‌ವಾಲ್ (20) ಬಂಧಿತರು. ಹೊರ ರಾಜ್ಯಗಳ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಶಂಕರಾನಂದ ಆಶ್ರಮ ಟ್ರಸ್ಟ್‌ ಸದಸ್ಯರನ್ನು ಸಂಪರ್ಕಿಸಿದ್ದ ಆರೋಪಿಗಳು, ಕಂಪನಿಯೊಂದರ ಸಿಎಸ್‌ಆರ್ ದೇಣಿಗೆ ಕೊಡಿಸುವುದಾಗಿ ಹೇಳಿದ್ದರು. ಆರಂಭದಲ್ಲಿಯೇ ಕಮಿಷನ್ ನೀಡಬೇಕೆಂದು ಹೇಳಿ ₹15 ಲಕ್ಷ ಪಡೆದುಕೊಂಡಿದ್ದರು. ಹಲವು ದಿನಗಳಾದರೂ ದೇಣಿಗೆ ಕೊಡಿಸಿರಲಿಲ್ಲ. ಕಮಿಷನ್ ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ಬೇಸತ್ತ ಟ್ರಸ್ಟ್ ಸದಸ್ಯರು ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

ವ್ಯವಸ್ಥಿತ ಜಾಲ: ‘ಆರೋಪಿ ಸುನೀತಾ, ಬಿ.ಎಸ್ಸಿ ಪದವೀಧರೆ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜಯಕುಮಾರ್, ಎಂಜಿನಿಯರಿಂಗ್ ಪದವೀಧರ. ರಾಜೇಂದ್ರ ಹೆಗ್ಡೆ, ಹೋಟೆಲ್ ಮಾಲೀಕ. ಇನ್ನೊಬ್ಬ ಆರೋಪಿ ಜತೀನ್ ಅಗರ್‌ವಾಲ್, ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿ’ ಎಂದು ಪೊಲೀಸರು ಹೇಳಿದರು.

‘ಜೆಎಸ್‌ಡಬ್ಲ್ಯು ಸ್ಟೀಲ್, ಆದಿತ್ಯಾ ಬಿರ್ಲಾ, ಅಲ್ಟ್ರಾಟೆಕ್, ಮಹೀಂದ್ರಾ ಹಾಗೂ ಇತರೆ ಕಂಪನಿಗಳ ಹೆಸರಿನಲ್ಲಿ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ತಾವೇ ಕಂಪನಿಯ ನಿರ್ದೇಶಕರು, ವ್ಯವಸ್ಥಾಪಕರು ಎಂಬುದಾಗಿ ಹೇಳಿಕೊಳ್ಳುತ್ತಿದ್ದರು.’

‘ಹಲವು ರಾಜ್ಯಗಳಲ್ಲಿ ಮಧ್ಯವರ್ತಿಗಳ ಮೂಲಕ ಟ್ರಸ್ಟ್ ಸದಸ್ಯರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ನೂರಾರು ಕೋಟಿ ರೂಪಾಯಿ ಸಿಎಸ್‌ಆರ್ ದೇಣಿಗೆ ಕೊಡಿಸುವುದಾಗಿ ಹೇಳುತ್ತಿದ್ದರು. ಅದಕ್ಕೆ ಕೆಲ ಶುಲ್ಕ ಹಾಗೂ ಕಮಿಷನ್ ನೀಡಬೇಕೆಂದು ಹೇಳುತ್ತಿದ್ದರು. ಅದನ್ನು ನಂಬಿ ಹಲವರು ಹಣ ಕೊಟ್ಟಿದ್ದರು. ಇದಾದ ನಂತರ, ಆರೋಪಿಗಳು ನಾಪತ್ತೆಯಾಗುತ್ತಿದ್ದರು’ ಎಂದು ತಿಳಿಸಿದರು.

50 ಮಂದಿಗೆ ವಂಚನೆ: ‘ಆರೋಪಿಗಳು ತಮ್ಮದೇ ತಂಡ ಕಟ್ಟಿಕೊಂಡು ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದಾರೆ. ಕರ್ನಾಟಕ ಹಾಗೂ ಹೊರ ರಾಜ್ಯಗಳ 50 ಮಂದಿಗೆ ಈಗಾಗಲೇ ವಂಚನೆ ಮಾಡಿರುವುದು ಗಮನಕ್ಕೆ ಬಂದಿದೆ’ ಎಂದು ಪೊಲೀಸರು ಹೇಳಿದರು.

ಜತೀನ್
ರಾಜೇಂದ್ರ ಹೆಗ್ಡೆ
ಜಯಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.