ಬೆಂಗಳೂರು: ಕಬ್ಬನ್ ಉದ್ಯಾನಕ್ಕೆ ಬೇಸಿಗೆಯಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಲು ಉದ್ಯಾನದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಹಾಗೂ ಇತರ ಜಲಮೂಲಗಳಿಂದ ನೀರು ಬಳಕೆಗೆತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
‘ಜೂನ್‌ನಿಂದ ಜನವರಿವರೆಗಿನ ಅವಧಿಯಲ್ಲಿ ದಿನಕ್ಕೆ ಕೇವಲ 5 ಲಕ್ಷ ಲೀಟರ್‌ಗಳಷ್ಟು ನೀರು ಉದ್ಯಾನಕ್ಕೆ ಸಾಕು. ಬೇಸಿಗೆಯಲ್ಲಿ ತುಸು ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಕಬ್ಬನ್ ಉದ್ಯಾನದಲ್ಲಿರುವ ಎಸ್‌ಟಿಪಿಯಿಂದ ದಿನಕ್ಕೆ 4 ದಶಲಕ್ಷ ಲೀಟರ್‌ಗಳಷ್ಟು (ಎಂಎಲ್‌ಡಿ) ನೀರು ಲಭ್ಯವಾಗುತ್ತಿದ್ದು, ಬೇಸಿಗೆಯಲ್ಲಿ ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಿದ್ದೇವೆ’
ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ. ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಉದ್ಯಾನದಲ್ಲಿ ಏಳು ಬಾವಿಗಳು, 72 ಇಂಗು ಗುಂಡಿಗಳು, ಎರಡು ಕೊಳಗಳು ಹಾಗೂ ಎರಡು ಕೊಳವೆಬಾವಿಗಳಿವೆ. ಮಳೆ ನೀರು ಸಂಗ್ರಹದ ವ್ಯವಸ್ಥೆಯೂ ಸಮರ್ಪಕವಾಗಿದೆ. ಬೇಸಿಗೆಯಲ್ಲೂ ಉದ್ಯಾನದ ನಿರ್ವಹಣೆಗೆ ದಿನಕ್ಕೆ 15 ಲಕ್ಷ ಲೀಟರ್‌ಗಳಷ್ಟು ನೀರು ಸಾಕಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆ ಕಡಿಮೆ’ ಎಂದರು.
‘ಮಳೆ ನೀರು ಸಂಗ್ರಹಕ್ಕಾಗಿ ಉದ್ಯಾನದಲ್ಲಿ ನಿರ್ಮಿಸಿರುವ ಇಂಗು ಗುಂಡಿಗಳು, ಬಾವಿಗಳಿಂದಾಗಿಬೇಸಿಗೆಯಲ್ಲಿ ನೀರಿನ ಅಭಾವ ಕಾಣುತ್ತಿಲ್ಲ. ಉದ್ಯಾನದ ಮರ–ಗಿಡಗಳಿಗೆ ಬೇಸಿಗೆ
ಯಲ್ಲೂ ಯಥಾಸ್ಥಿತಿಯಲ್ಲಿ ನೀರು ನಿರ್ವಹಣೆ ಆಗಲಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಉದ್ಯಾನದ ಕಮಲದ ಕೊಳದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಂಡ ನಂತರ ಇಲ್ಲಿಯೂ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಳ್ಳಲಿದೆ’ ಎಂದು ಹೇಳಿದರು.
ನೀರು ಇಂಗಿಸಲು ಸೂಕ್ತ ಸ್ಥಳ: ‘ಕಬ್ಬನ್ ಉದ್ಯಾನವು ಮಳೆ ನೀರು ಇಂಗಿಸಲು ಸೂಕ್ತವಾದ ಸ್ಥಳ.
ಮಳೆ ನೀರು ಸಂಗ್ರಹಕ್ಕೆ ಇಲ್ಲಿ ಪೂರಕ ವಾತಾವರಣವಿದೆ.ಕಬ್ಬನ್ ಉದ್ಯಾನದ ಜಲಸ್ಥಿತಿಗೆ ಸಂಬಂಧಿಸಿ ಅಲ್ಲಿನಮಳೆಯ ದತ್ತಾಂಶ, ಜಲಮೂಲಗಳ ಸಾಮರ್ಥ್ಯ ಕುರಿತು ಸಂಶೋಧನಾ ವಿದ್ಯಾರ್ಥಿಗಳಿಂದ ಅಧ್ಯಯನ ನಡೆಯುತ್ತಿದೆ’ಎಂದು ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ (ಯುವಿಸಿಇ)ಜಲಸಂಪನ್ಮೂಲ ಎಂಜಿನಿಯರಿಂಗ್ ವಿಭಾಗದ ಪ್ರೊ.ಎಂ.ಇನಾಯತ್ ಉಲ್ಲಾ ವಿವರಿಸಿದರು.
‘ಹುಲ್ಲು ಕಡಿಮೆಗೊಳಿಸಿ– ನೀರು ಉಳಿಸಿ’
‘ಉದ್ಯಾನದ ಖಾಲಿ ಜಾಗಗಳಲ್ಲಿ ಹುಲ್ಲುಹಾಸನ್ನು ಹೆಚ್ಚಾಗಿ ಬೆಳೆಸುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಬೇಕಾಗುತ್ತದೆ. ಹುಲ್ಲಿನ ಬದಲಿಗೆ ಮರಗಳನ್ನು ಬೆಳೆಸುವುದು ಒಳ್ಳೆಯದು. ಹುಲ್ಲು ಬೆಳೆಸುವುದನ್ನು ಕಡಿಮೆ ಮಾಡಿದರೆ, ಉದ್ಯಾನಕ್ಕೆ ಮತ್ತಷ್ಟು ನೀರು ಉಳಿಯಲಿದೆ’ ಎಂದು ಜಲತಜ್ಞ ಎಸ್.ವಿಶ್ವನಾಥ್ ಸಲಹೆ ನೀಡಿದರು.
ಅಂಕಿ ಅಂಶ
197 ಎಕರೆ
ಕಬ್ಬನ್ ಉದ್ಯಾನದ ವಿಸ್ತೀರ್ಣ
9000
ಉದ್ಯಾನದಲ್ಲಿರುವ ಮರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.