ಬೆಂಗಳೂರು: ಕಬ್ಬನ್ ಉದ್ಯಾನದ ಬಾಲ ಭವನ ರಸ್ತೆಯಲ್ಲಿ ಬಿದಿರು ತಮ್ಮ ಮೇಲೆ ಬೀಳಬಹುದು ಎಂದು ಭಯದಿಂದ ಹೆಜ್ಜೆ ಹಾಕುತ್ತಿದ್ದ ಸಾರ್ವಜನಿಕರು ಇನ್ನು ಮುಂದೆ ನಿರಾತಂಕವಾಗಿ ಸಂಚರಿಸಬಹುದು. ಇಲ್ಲಿದ್ದಒಣ ಬಿದಿರು ಮೆಳೆಗಳನ್ನು ತೋಟಗಾರಿಕಾ ಇಲಾಖೆಯು ಬುಡಸಮೇತ ತೆರವು ಗೊಳಿಸಿದೆ.
ಬಾಲಭವನ ರಸ್ತೆಯಲ್ಲಿ ವಾರಾಂತ್ಯ ದಲ್ಲಿ ಜನರ ಓಡಾಟ ಸಂಖ್ಯೆ ಜಾಸ್ತಿ ಇರುತ್ತದೆ. ಇಲ್ಲಿ ಒಣಗಿದ್ದ ಬಿದಿರು ಮೆಳೆಗಳು ರಸ್ತೆಯ ಮೇಲೆ ಉರುಳುತ್ತಿದ್ದವು. ಇದರಿಂದ ಪ್ರವಾಸಿಗರು ಭಯದಲ್ಲೇ ಹೆಜ್ಜೆ ಹಾಕಬೇಕಾಗುತ್ತಿತ್ತು.
ತೋಟಗಾರಿಕೆ ಇಲಾಖೆ ಈ ಹಿಂದೆ, ಪ್ರೆಸ್‌ಕ್ಲಬ್ ಕಡೆಗೆ ಸಾಗುವ ಮಾರ್ಗ ಮಧ್ಯೆ ಇದ್ದ ಬಿದಿರು ಮೆಳೆಗಳನ್ನು ಬೇರು ಸಮೇತ ತೆರವು ಮಾಡಿಸಿ ಅಲ್ಲಿ ನಾನಾ ಬಗೆಯ ಬಿದಿರು ತಳಿಗಳ ಗಿಡಗಳನ್ನು ನೆಟ್ಟಿತ್ತು.
ಇದೇ ವೇಳೆ ಬಾಲಭವನ ರಸ್ತೆಯಲ್ಲಿದ್ದ 200ಕ್ಕೂ ಅಧಿಕ ಒಣ ಬಿದಿರಿನ ಮೆಳೆಗಳೂ ತೆರವಾಗಬೇಕಿತ್ತು. ಆದರೆ, ಗುತ್ತಿಗೆದಾರ ಇವುಗಳನ್ನು ತೆರವು ಮಾಡಿರಲಿಲ್ಲ. ಆತ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರಿಂದ ಇಲಾಖೆಯು ಗುತ್ತಿಗೆ ರದ್ದು ಮಾಡಿತ್ತು. ಇದೀಗ ಖುದ್ದಾಗಿ ತೆರವು ಮಾಡಿದೆ.
‘ಒಣಬಿದಿರು ಬೀಳುತ್ತದೆ ಎಂಬ ಆತಂಕ ಇದ್ದುದರಿಂದ ಉದ್ಯಾನಕ್ಕೆ ಭೇಟಿ ನೀಡುವವರಿಗೆ ಸಮಸ್ಯೆಯಾಗಿತ್ತು. ಟೆಂಡರ್ ರದ್ದುಗೊಳಿಸಿ ಇಲಾಖೆ ವತಿಯಿಂದಲೇ ತೆರವು ಕಾರ್ಯ ಮಾಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ (ಕಬ್ಬನ್ ಉದ್ಯಾನ) ಜಿ. ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ದಟ್ಟವಾಗಿ ಬೆಳೆದಿರುವ ಕಾರಣ ಒಂದೊಂದು ಬಿದಿರು ಮೆಳೆಯ ಬುಡವನ್ನು ಬಿಡಿಸಲು ಸಾಕಷ್ಟು ಸಮಯ ಬೇಕಾಯಿತು. ತೆರವು ಮಾಡುವುದಕ್ಕಾಗಿಯೇ 15 ಕೆಲಸಗಾರರನ್ನು ನೇಮಿಸಲಾಗಿದೆ. ಅವರಿಗೆ ಮುಳ್ಳು ತಾಗದಂತೆ ಕೈಗವಸು, ಶೂ, ಟೋಪಿ ಧರಿಸಲು ಸೂಚಿಸಲಾಗಿತ್ತು. ಒಂದು ತಿಂಗಳಿನಿಂದ ನಡೆದ ಮೆಳೆಗಳ ತೆರವು ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದೆ’ ಎಂದರು.
‘ಬಾಲಭವನ ಕಾಂಪೌಂಡ್ ಸುತ್ತಲೂ ಎರಡು ಕಡೆ ಬಿದಿರು ಮೆಳೆಗಳು ಒಣಗಿವೆ. ಇವು ಬಾಲಭವನ ವ್ಯಾಪ್ತಿಗೆ ಸೇರಿವೆ. ಬಿದಿರು ಮೆಳೆ ತೆರವು ಮಾಡುವ ಕುರಿತು ಬಾಲಭವನ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.
*
ಒಣಗಿದ್ದ ಬಿದಿರು ಮೆಳೆಗಳನ್ನು ತೆರವು ಮಾಡಿರುವುದು ಒಳ್ಳೆಯದು. ಬಿದಿರು ಕಬ್ಬನ್ ಪಾರ್ಕ್‌ನ ಆಕರ್ಷಣೆ. ತೆರವುಗೊಂಡ ಜಾಗದಲ್ಲೇ ಪುನಃ ಬಿದಿರು ಸಸಿಗಳನ್ನು ನೆಡಬೇಕು.
-ಎಸ್.ಉಮೇಶ್,ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ
*
ಬಾಲಭವನ ರಸ್ತೆಯ ಪ್ರವೇಶ ದ್ವಾರ ಮುಚ್ಚಿರುವುದರಿಂದ ಇಲ್ಲಿ ವಾಹನಗಳ ಓಡಾಟ ಇಲ್ಲ. ಒಂದು ವೇಳೆ ಇದ್ದಿದ್ದರೆ ವಾಹನಗಳು ಚಲಿಸುವಾಗ ಬಿದಿರು ಬಿದ್ದು ಸಮಸ್ಯೆಯಾಗುತ್ತಿತ್ತು.
-ಅನುಶ್ರೀ, ಬೆಂಗಳೂರು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.