ADVERTISEMENT

ಬೆಂಗಳೂರು: ನಾಳೆಯಿಂದ ಕಲಾ ಕಲರವ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:01 IST
Last Updated 8 ನವೆಂಬರ್ 2024, 16:01 IST
.
.   

ಬೆಂಗಳೂರು: ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ನ (ಐಜಿಎನ್‌ಸಿಎ) ಬೆಂಗಳೂರು ಪ್ರಾದೇಶಿಕ ಕೇಂದ್ರವು ಇದೇ 9 ಮತ್ತು 10ರಂದು ಮಲ್ಲತ್ತಹಳ್ಳಿಯಲ್ಲಿರುವ ತನ್ನ ಕೇಂದ್ರದಲ್ಲಿ ‘ಕಲಾ ಕಲರವ’ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದೆ. 

ಐಜಿಎನ್‌ಸಿಎ ತ್ರಿಶೂರ್ ಪ್ರಾದೇಶಿಕ ಕೇಂದ್ರದ ಸಹಯೋಗದಲ್ಲಿ ಈ ಉತ್ಸವ ನಡೆಯಲಿದೆ. ಕರ್ನಾಟಕ ಮತ್ತು ಕೇರಳದ ಕಲೆ, ಸಂಸ್ಕೃತಿಯನ್ನು ಆಚರಿಸುವ ಉತ್ಸವ ಇದಾಗಿದೆ. ಎರಡೂ ದಿನ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದಲ್ಲಿ 5 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ರಂಗೋಲಿ, ಚಿತ್ರಕಲೆ, ಸಂಗೀತ, ನೃತ್ಯ ಮತ್ತು ಸಂಸ್ಕೃತಿಯ ಕುರಿತಾದ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ. ಪ್ರತಿದಿನ 400ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಐಜಿಎನ್‌ಸಿಎ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಮಹೇಂದ್ರ ಡಿ. ತಿಳಿಸಿದ್ದಾರೆ.

‘ಮಕ್ಕಳ ಮನಸ್ಸನ್ನು ಭಾರತೀಯ ಸಂಸ್ಕೃತಿ, ಪರಂಪರೆಗಳೆಡೆಗೆ ಸೆಳೆಯುವುದು ಮತ್ತು ಸಾಂಸ್ಕೃತಿಕ ಸಾಕ್ಷರತೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಉತ್ಸವ ಹೊಂದಿದೆ. ಎರಡೂ ದಿನ ಸಂಜೆ ಸಾರ್ವಜನಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ ಮತ್ತು ಕೇರಳದ ಶ್ರೀಮಂತ ಸಂಪ್ರದಾಯಗಳನ್ನು ಪ್ರಸ್ತುತಪಡಿಸುವ ಮೋಹಿನಿಯಾಟ್ಟಂ, ಒಟ್ಟನ್ ತುಳ್ಳಲ್, ಕಳರಿ ಪಯಟ್ಟು, ಭರತನಾಟ್ಯ ಮತ್ತು ಯಕ್ಷಗಾನ ಸೇರಿದಂತೆ ಪ್ರಮುಖ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.