ADVERTISEMENT

ಅನರ್ಹ ಕಾರ್ಮಿಕ ಕಾರ್ಡ್‌ಗಳಿಗೆ ಕಡಿವಾಣ: ಸಂತೋಷ್‌ ಲಾಡ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 15:47 IST
Last Updated 13 ಫೆಬ್ರುವರಿ 2024, 15:47 IST
ಸಂತೋಷ್‌ ಲಾಡ್‌
ಸಂತೋಷ್‌ ಲಾಡ್‌   

ಬೆಂಗಳೂರು: ‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಾರ್ಡ್‌ ಪಡೆದಿರುವವರಲ್ಲಿ ಶೇಕಡ 50ಕ್ಕೂ ಹೆಚ್ಚು ಮಂದಿ ಅನರ್ಹರಿರುವ ಅನುಮಾನವಿದ್ದು, ಅಂತಹ ಕಾರ್ಡ್‌ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ಬಿಜೆಪಿಯ ಸಿದ್ದು ಸವದಿ ಪ್ರಶ್ನೆಗೆ ವಿಧಾನಸಭೆಯಲ್ಲಿ ಮಂಗಳವಾರ ಉತ್ತರ ನೀಡಿದ ಅವರು, ‘ಮಂಡಳಿಯಿಂದ 53 ಲಕ್ಷ ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ಮೊದಲ ಹಂತದ ಪರಿಶೀಲನೆ ವೇಳೆ ಏಳು ಲಕ್ಷ ಅನರ್ಹ ಕಾರ್ಡ್‌ಗಳನ್ನು ಪತ್ತೆಹಚ್ಚಲಾಗಿದೆ’ ಎಂದರು.

‍ಪ್ರತಿ ಜಿಲ್ಲೆಯಲ್ಲೂ 2.5 ಲಕ್ಷದಿಂದ 3 ಲಕ್ಷ ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಅವುಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಅನರ್ಹರ ಪಾಲಾಗಿವೆ. ಹಾವೇರಿ ಜಿಲ್ಲೆಯಲ್ಲಿ 3 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಿದಾಗ 2.70 ಲಕ್ಷ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ ಎಂದು ತಿಳಿಸಿದರು. ಅನರ್ಹ ಫಲಾನುಭವಿಗಳ ಪತ್ತೆಗೆ ಇನ್ನಷ್ಟು ಪರಿಶೀಲನೆ ಅಗತ್ಯವಿದೆ. ಕೆಲವು ತಿಂಗಳೊಳಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅನರ್ಹರಿಗೆ ನೀಡಿರುವ ಕಾರ್ಡ್‌ಗಳ ರದ್ಧತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಪ್ರತ್ಯೇಕ ವಸತಿ ಯೋಜನೆ

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗಾಗಿ ಪ್ರತ್ಯೇಕವಾದ ವಸತಿ ಯೋಜನೆಯನ್ನು ರೂಪಿಸಲಾಗುತ್ತಿದೆ. ಶೀಘ್ರದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿಗಳನ್ನು ಜಿಲ್ಲಾ ಮಟ್ಟದಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಆರು ತಿಂಗಳಲ್ಲಿ ಈ ಕಚೇರಿಗಳು ಕಾರ್ಯಾರಂಭ ಮಾಡಲಿವೆ ಎಂದರು. ಕಾರ್ಮಿಕರ ನೋಂದಣಿ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಮತ್ತಿತರ ಕೆಲಸಗಳನ್ನು ನಿರ್ವಹಿಸಲು ಜಿಲ್ಲಾ ಮಟ್ಟದ ಕಚೇರಿಗಳ ಅಗತ್ಯವಿದೆ. ಇದರಿಂದ ಅರ್ಹ ಕಾರ್ಮಿಕರನ್ನು ಗುರುತಿಸಲು ಸುಲಭವಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.