ADVERTISEMENT

ಬೆಂಗಳೂರು | ಕಸ್ಟಮ್ಸ್ ಜಪ್ತಿ ವಸ್ತು ಕೊಡಿಸುವ ಆಮಿಷ: ವಂಚನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 15:54 IST
Last Updated 24 ಡಿಸೆಂಬರ್ 2023, 15:54 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿರುವ ಚಿನ್ನಾಭರಣವನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ₹ 2 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

‘ಚಹಾ ಅಂಗಡಿ ಮಾಲೀಕರಾಗಿರುವ 44 ವರ್ಷದ ವ್ಯಕ್ತಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಮೊಹಮ್ಮದ್ ಸುಜ್ಜ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ವಿಮಾನ ನಿಲ್ದಾಣ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ದೂರುದಾರರ ಚಹಾ ಅಂಗಡಿಗೆ ಆಗಾಗ ಹೋಗಿ ಬರುತ್ತಿದ್ದ ಆರೋಪಿ, ವಿಮಾನ ನಿಲ್ದಾಣದಲ್ಲಿರುವ ಕಸ್ಟಮ್ಸ್ ಅಧಿಕಾರಿಗಳು ತನಗೆ ಆಪ್ತರೆಂದು ಹೇಳುತ್ತಿದ್ದ. ‘ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿರುವ ಟಿ.ವಿ., ಮೊಬೈಲ್, ಚಿನ್ನಾಭರಣ ಹಾಗೂ ಇತರೆ ವಸ್ತುಗಳು ಕಡಿಮೆ ಬೆಲೆಗೆ ಮಾರಾಟಕ್ಕಿವೆ’ ಎಂಬುದಾಗಿ ಆರೋಪಿ ತಿಳಿಸಿದ್ದ.’

‘ಆರೋಪಿ ಮಾತು ನಂಬಿದ್ದ ದೂರುದಾರ, ತಮ್ಮ ಮಗನ ಮದುವೆಗೆ ಅಗತ್ಯವಿದ್ದ ಚಿನ್ನಾಭರಣ ಖರೀದಿಸಲು ಮುಂದಾಗಿದ್ದರು. ವಿಮಾನ ನಿಲ್ದಾಣದ 1ನೇ ಟರ್ಮಿನಲ್ ಬಳಿ ಹೋಗಿದ್ದ ದೂರುದಾರ, ಆರೋಪಿಗೆ ₹ 2 ಲಕ್ಷ ನೀಡಿದ್ದರು. ಕಸ್ಟಮ್ಸ್ ಕಚೇರಿಯಲ್ಲಿರುವ ಚಿನ್ನಾಭರಣ ನೋಡಲು ಪಾಸ್ ತರುವುದಾಗಿ ಹೇಳಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.