ಬೆಂಗಳೂರು: ಸಾಲಕ್ಕೆ ಅರ್ಜಿ ಸಲ್ಲಿಸದಿದ್ದರೂ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವ ಆ್ಯಪ್ ಕಂಪನಿಯೊಂದರ ಪ್ರತಿನಿಧಿಗಳು, ಸಾಲ ವಸೂಲಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ವಿಲ್ಸನ್ ಗಾರ್ಡನ್ ನಿವಾಸಿಯಾಗಿರುವ 36 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕಂಪನಿಯೊಂದರ ಉದ್ಯೋಗಿಯಾದ ಮಹಿಳೆ, ಮೊಬೈಲ್ ಅಪ್ಲಿಕೇಷನ್‌ವೊಂದರಿಂದ ಸಾಲದ ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಆದರೆ, ಆ್ಯಪ್ ಬಳಕೆ ಮಾಡುತ್ತಿರಲಿಲ್ಲ. ಯಾವುದೇ ಸಾಲಕ್ಕೂ ಅರ್ಜಿ ಸಲ್ಲಿಸಿರಲಿಲ್ಲ’ ಎಂದು ತಿಳಿಸಿದರು.
‘ಕೆಲ ದಿನಗಳ ನಂತರ ದೂರುದಾರ ಮಹಿಳೆಯ ಬ್ಯಾಂಕ್ ಖಾತೆಗೆ ಆರೋಪಿಗಳು ಮೂರು ಬಾರಿ ತಲಾ ₹ 2,400 ಜಮೆ ಮಾಡಿದ್ದರು. ಕೆಲ ದಿನಗಳ ಬಳಿಕ ವಿವಿಧ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡುತ್ತಿರುವ ಆರೋಪಿಗಳು, ಸಾಲದ ಹಣ ವಾಪಸು ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ’ ಎಂದು ಹೇಳಿದರು.
ಅಶ್ಲೀಲ ಫೋಟೊ ಬೆದರಿಕೆ: ‘ದೂರುದಾರ ಮಹಿಳೆ ಹಾಗೂ ಅವರ ಮಗಳ ಫೋಟೊವನ್ನು ಅಶ್ಲೀಲವಾಗಿ ಮಾರ್ಪಾಡು ಮಾಡಿರುವ ಆರೋಪಿಗಳು, ಅದನ್ನು ತೋರಿಸಿ ಬೆದರಿಕೆಯೊಡುತ್ತಿದ್ದಾರೆ. ಮೊಬೈಲ್‌ನಲ್ಲಿರುವ ಎಲ್ಲ ಮೊಬೈಲ್ ಸಂಖ್ಯೆಗೂ ಫೋಟೊ ಕಳುಹಿಸುವುದಾಗಿ ಹೇಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಆ್ಯಪ್ ಇನ್‌ಸ್ಟಾಲ್ ಮಾಡುವ ಸಂದರ್ಭದಲ್ಲಿಯೇ ಆರೋಪಿಗಳು, ದೂರುದಾರ ಮೊಬೈಲ್ ದತ್ತಾಂಶವನ್ನು ಕದ್ದಿದ್ದಾರೆ. ಇದೇ ದತ್ತಾಂಶ ಬಳಸಿಕೊಂಡು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಹೊರ ರಾಜ್ಯದ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿಯೂ ಇದೆ. ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.