ADVERTISEMENT

ಕ್ರೆಡಿಟ್ ಕಾರ್ಡ್ ನವೀಕರಣ ಸೋಗು: ಉದ್ಯೋಗಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:48 IST
Last Updated 5 ಮೇ 2024, 15:48 IST
 ಕ್ರೆಡಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್   

ಬೆಂಗಳೂರು: ಕ್ರೆಡಿಟ್ ಕಾರ್ಡ್ ನವೀಕರಣ ಮಾಡಬೇಕೆಂದು ಹೇಳಿ ಕಂಪನಿಯೊಂದರ ಉದ್ಯೋಗಿಯಿಂದ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ದೋಚಲಾಗಿದ್ದು, ಅಶೋಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಸೇಂಟ್ ಜಾನ್ಸ್‌ ರಸ್ತೆಯ ಆದಿತ್ಯ ಅವರು ವಂಚನೆ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೊಬೈಲ್ ನಂಬರ್ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಆದಿತ್ಯ ಅವರು ಮೇ 2ರಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ 4 ಗಂಟೆ ಸುಮಾರಿಗೆ ಅವರ ಮೊಬೈಲ್‌ಗೆ 708****472 ಸಂಖ್ಯೆಯಿಂದ ಕರೆ ಬಂದಿತ್ತು. ಬ್ಯಾಂಕ್ ಪ್ರತಿನಿಧಿ ಹೆಸರಿನಲ್ಲಿ ಮಾತನಾಡಿದ್ದ ಆರೋಪಿ, ‘ನಿಮ್ಮ ಕ್ರೆಡಿಟ್ ಕಾರ್ಡ್‌ ಅವಧಿ ಮುಗಿಯುತ್ತಿದೆ. ಅದನ್ನು ನವೀಕರಣ ಮಾಡಬೇಕು. ಇಲ್ಲದಿದ್ದರೆ, ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ಕಾರ್ಡ್ ಮಾಹಿತಿ ಹಾಗೂ ಒಟಿಪಿ (ಒನ್ ಟೈಂ ಪಾಸ್‌ವರ್ಡ್‌) ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಕೆಲ ಕ್ಷಣಗಳ ನಂತರ ದೂರುದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 99,440 ಕಡಿತಗೊಂಡಿದೆ. ಆರೋಪಿ ಮೊಬೈಲ್‌ಗೆ ಕರೆ ಮಾಡಿದಾಗ, ಸ್ವಿಚ್ ಆಫ್ ಆಗಿತ್ತು. ಹೊರ ರಾಜ್ಯದ ವ್ಯಕ್ತಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.