ADVERTISEMENT

ಬೆಂಗಳೂರು | ಷೇರು ವ್ಯವಹಾರ: ₹5.18 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 15:33 IST
Last Updated 21 ಏಪ್ರಿಲ್ 2024, 15:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಷೇರು ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದೆಂದು ಹೇಳಿ ವ್ಯಕ್ತಿಯೊಬ್ಬರಿಂದ ₹5.18 ಕೋಟಿ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದ ನಿವಾಸಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರರ ಮೊಬೈಲ್ ವಾಟ್ಸ್‌ಆ್ಯಪ್‌ಗೆ ಕೆಲ ದಿನಗಳ ಹಿಂದೆಯಷ್ಟೇ ಸಂದೇಶವೊಂದು ಬಂದಿತ್ತು. ‘ಷೇರು ವ್ಯವಹಾರದಲ್ಲಿ ಹಣ ತೊಡಗಿಸಿ, ದುಪ್ಪಟ್ಟು ಲಾಭ ಗಳಿಸಿ’ ಎಂಬುದು ಸಂದೇಶದಲ್ಲಿತ್ತು. ಜೊತೆಗೆ, ಜಾಲತಾಣವೊಂದರ ಲಿಂಕ್ ಸಹ ನಮೂದಿಸಲಾಗಿತ್ತು. ನೋಂದಣಿ ಮಾಡಿಕೊಳ್ಳುವಂತೆ ಬರೆಯಲಾಗಿತ್ತು.’

ADVERTISEMENT

‘ಸಂದೇಶ ನಂಬಿದ್ದ ದೂರುದಾರ, ಪ್ರತಿಕ್ರಿಯೆ ನೀಡಿದ್ದರು. ಲಿಂಕ್ ಕ್ಲಿಕ್ ಮಾಡಿ ಜಾಲತಾಣ ತೆರೆದಿದ್ದರು. ಹೆಸರು ಹಾಗೂ ವೈಯಕ್ತಿಕ ಮಾಹಿತಿಯನ್ನು ದಾಖಲಿಸಿ ನೋಂದಣಿ ಮಾಡಿಕೊಂಡಿದ್ದರು. ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ಸಹ ಸೃಷ್ಟಿಸಿಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ದೂರುದಾರ ಖಾತೆ ತೆರೆಯುತ್ತಿದ್ದಂತೆ ಆರೋಪಿಗಳು ಮತ್ತೊಂದು ಸಂದೇಶ ಕಳುಹಿಸಿದ್ದರು. ದುಪ್ಪಟ್ಟು ಲಾಭ ನೀಡುವ ಷೇರುಗಳನ್ನು ಖರೀದಿಸುವಂತೆ ಸಲಹೆ ನೀಡಿದ್ದರು. ಅದನ್ನು ನಂಬಿದ್ದ ದೂರುದಾರ, ಆರಂಭದಲ್ಲಿ ಕೆಲ ಷೇರುಗಳನ್ನು ಖರೀದಿಸಿದ್ದರು. ಕೆಲ ದಿನಗಳ ನಂತರ ಯಾವುದೇ ಲಾಭ ಬಂದಿರಲಿಲ್ಲ.’

‘ಲಾಭದ ಬಗ್ಗೆ ಪ್ರಶ್ನಿಸಿದಾಗ ಮತ್ತಷ್ಟು ಷೇರುಗಳನ್ನು ಖರೀದಿಸುವಂತೆ ಆರೋಪಿಗಳು ಹೇಳಿದ್ದರು. ಅದನ್ನೂ ನಂಬಿ, ಪುನಃ ಷೇರು ಖರೀದಿಸಿದ್ದರು. ಅವಾಗಲೂ ಲಾಭ ಬಂದಿರಲಿಲ್ಲ. ಒಂದೇ ಬಾರಿಗೆ ಷೇರಿನ ಮೊತ್ತ ಹಾಗೂ ಲಾಭದ ಹಣ ವಾಪಸು ನೀಡುವುದಾಗಿ ಹೇಳಿದ್ದ ಆರೋಪಿಗಳು, ಪುನಃ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು. ಇದಾದ ನಂತರ ದೂರುದಾರ, ಹಂತ ಹಂತವಾಗಿ ₹5.18 ಕೋಟಿ ಕಟ್ಟಿದ್ದರು. ಆರೋಪಿಗಳು, ಪುನಃ ಹಣ ಕೇಳಿದಾಗ ಅನುಮಾನಗೊಂಡು ಠಾಣೆಗೆ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ದೂರುದಾರ, ಹೆಚ್ಚಿನ ಲಾಭ ಪಡೆಯುವ ಆಸೆಗಾಗಿ ಹಣ ಕಳೆದುಕೊಂಡಿದ್ದಾರೆ. ಚಿನ್ನಾಭರಣ ಮಾರಿ ಹಾಗೂ ಸಾಲ ಮಾಡಿ ಹಣ ನೀಡಿರುವ ಮಾಹಿತಿ ಇದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.