ADVERTISEMENT

ಸೈಬರ್ ಕ್ರೈಂ: ದೇಶದಲ್ಲಿ ಬೆಂಗಳೂರು ಮೊದಲು

* ಎನ್‌ಸಿಆರ್‌ಬಿ ವರದಿ 2022 * ರಾಜ್ಯದಲ್ಲೂ ಅಪರಾಧಗಳು ಏರಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 16:01 IST
Last Updated 4 ಡಿಸೆಂಬರ್ 2023, 16:01 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ಬೆಂಗಳೂರು: ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ದೇಶದ ನಗರಗಳ ಪೈಕಿ ಬೆಂಗಳೂರು ಹಾಗೂ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

2022ರ ಜನವರಿಯಿಂದ ಡಿಸೆಂಬರ್‌ವರೆಗಿನ ಅಪರಾಧಗಳ ಅಂಕಿ–ಅಂಶವನ್ನು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೊ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದೆ.

‘ಅಂತರ್ಜಾಲ ಬಳಕೆ ಪ್ರಮಾಣ ಹೆಚ್ಚಾಗಿದೆ. ಆನ್‌ಲೈನ್ ಮೂಲಕ ನಗದು ವರ್ಗಾವಣೆ ಸುಲಭವಾಗಿದೆ. ಇದೇ ಕಾರಣಕ್ಕೆ ವಂಚಕರು, ಆನ್‌ಲೈನ್ ವ್ಯವಸ್ಥೆ ಬಳಸಿಕೊಂಡು ಜನರಿಂದ ಹಣ ದೋಚುತ್ತಿದ್ದಾರೆ. ಈ ಕಾರಣಕ್ಕೆ ಸೈಬರ್ ಅಪರಾಧಗಳು ಮೇಲಿಂದ ಮೇಲೆ ಹೆಚ್ಚಾಗುತ್ತಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ದೇಶದ 19 ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಲಖನೌ ಹಾಗೂ ಗಾಜಿಯಾಬಾದ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ’ ಎಂಬ ಅಂಶ ವರದಿಯಲ್ಲಿದೆ.

2021ಕ್ಕಿಂತ ಹೆಚ್ಚು ಪ್ರಕರಣ: ‘2021ರಲ್ಲಿ ಬೆಂಗಳೂರಿನಲ್ಲಿ 6,423 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದವು. ಆದರೆ, 2022ರಲ್ಲಿ 9,940 ಪ್ರಕರಣ ದಾಖಲಾಗಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘2019ರಲ್ಲಿ 10,555 ಪ್ರಕರಣ ಹಾಗೂ 2020ರಲ್ಲಿ 8,892 ಪ್ರಕರಣಗಳು ದಾಖಲಾಗಿದ್ದವು’ ಎಂಬ ಮಾಹಿತಿಯೂ ವರದಿಯಲ್ಲಿದೆ.

ಐಟಿ ನಗರ: ‘ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಹಾಗೂ ಇತರೆ ಕಂಪನಿಗಳು ಹೆಚ್ಚಾಗಿವೆ. ಜೊತೆಗೆ, ಆರ್ಥಿಕವಾಗಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಯ ಜನರನ್ನು ಗುರಿಯಾಗಿಸಿಕೊಂಡು ವಂಚಕರು ಹಣ ದೋಚುತ್ತಿದ್ದಾರೆ’ ಎಂಬ ಅಂಶ ವರದಿಯಲ್ಲಿದೆ.

ರಾಜ್ಯದಲ್ಲೂ ಹೆಚ್ಚಳ: ‘ಕರ್ನಾಟಕದಲ್ಲೂ 2022ರಲ್ಲಿ 12,549 ಪ್ರಕರಣಗಳು ದಾಖಲಾಗಿವೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.