ADVERTISEMENT

Cyber Crime | ಐಟಿ ಉದ್ಯೋಗಿಗೆ ಬೆದರಿಕೆ ಹಾಕಿ ₹3.7 ಕೋಟಿ ಸುಲಿಗೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 23:30 IST
Last Updated 29 ನವೆಂಬರ್ 2023, 23:30 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ಬೆಂಗಳೂರು: ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವುದಾಗಿ ಐ.ಟಿ ಕಂಪನಿ ಉದ್ಯೋಗಿಯೊಬ್ಬರಿಗೆ ಸೈಬರ್‌ ದಂಧೆಕೋರರು ಬೆದರಿಕೆ ಹಾಕಿ, ₹3.7 ಕೋಟಿ ಸುಲಿಗೆ ನಡೆಸಿರುವುದು ಪತ್ತೆಯಾಗಿದೆ. ವೈಟ್‌ಫೀಲ್ಡ್‌ನ ಇನ್ಪೊಸಿಸ್‌ ಕಾರ್ಯನಿರ್ವಾಹಕರೊಬ್ಬರು ಹಣ ಕಳೆದುಕೊಂಡಿದ್ದಾರೆ.

ಭಾರತೀಯ ದೂರಸಂಪರ್ಕ ಪ್ರಾಧಿಕಾರ, ಸಿಬಿಐ ಹಾಗೂ ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿರುವ ದಂಧೆಕೋರರು, ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸುವುದಾಗಿ ಕರೆ ಮಾಡಿ ಬೆದರಿಸಿ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನ.21ರಂದು ವ್ಯಕ್ತಿಯೊಬ್ಬ ಕರೆ ಮಾಡಿ, ತಮ್ಮ ವಿರುದ್ಧ ಮುಂಬೈನಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲು ಮಾಡುವ ಬಗ್ಗೆ ಪ್ರಸ್ತಾಪಿಸಿದ್ದ. ಅದಾದ ಎರಡು ದಿನಗಳ ನಂತರ ಕರೆ ಮಾಡಿ ₹ 3.7 ಕೋಟಿ ನೀಡುವಂತೆ ಬೆದರಿಕೆ ಹಾಕಿ ವಿವಿಧ ಬ್ಯಾಂಕ್‌ ಖಾತೆಗಳ ಸಂಖ್ಯೆಗಳನ್ನು ನೀಡಿದ್ದ’ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

‘ಹಣ ವರ್ಗಾವಣೆ ಮಾಡಿದರೆ ನಿಮ್ಮ ಮೇಲಿರುವ ಎಲ್ಲ ಪ್ರಕರಣ ರದ್ದು ಮಾಡಲಾಗುವುದು. ಜತೆಗೆ, ಲೆಕ್ಕ ಪರಿಶೋಧನೆಯಾದ ಮೇಲೆ ತಮ್ಮ ಬ್ಯಾಂಕ್‌ ಖಾತೆಗಳಿಗೇ ಹಣವನ್ನು ವಾಪಸ್ ಹಾಕಲಾಗುವುದು ಎಂದು ನಂಬಿಸಿದ್ದರು. ಅದರಂತೆ ಎಕ್ಸಿಕ್ಯುಟಿವ್ ಹಣ ವರ್ಗಾವಣೆ ಮಾಡಿದ್ದರು’

‘ಸೈಬರ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಹಣ ವರ್ಗಾವಣೆ ಮಾಡಿರುವ ಆರೋಪಿಗಳ ಬ್ಯಾಂಕ್‌ ಖಾತೆಗಳ ವ್ಯವಹಾರ ಸ್ಥಗಿತಗೊಳಿಸುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.