ಬೆಂಗಳೂರು: ಸೈಬರ್ ಖದೀಮರು ಹಣ ದೋಚಲು ದಿನಕ್ಕೊಂದು ತಂತ್ರ ರೂಪಿಸುತ್ತಿದ್ದು, ಮತ್ತೊಂದು ವಿನೂತನ ವಂಚನೆ ವಿಧಾನ ಕಂಡುಕೊಂಡಿದ್ದಾರೆ. ಕುಟುಂಬದ ಸದಸ್ಯರೊಬ್ಬರ ಅಥವಾ ತಮ್ಮ ಮಕ್ಕಳ ಅಪಹರಣವಾಗಿದೆ ಎಂದು ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.
ಸೈಬರ್ ಕಳ್ಳರು ಅನುಸರಿಸುತ್ತಿರುವ ಹೊಸ ವಿಧಾನಗಳು ಸೈಬರ್ ಅಪರಾಧ ಠಾಣೆಯ ಪೊಲೀಸರಿಗೂ ತಲೆನೋವಾಗಿದೆ. ‘ಅಪರಿಚಿತ ಕರೆಗಳು’ ಜನರ ನೆಮ್ಮದಿಯನ್ನೂ ಕೆಡಿಸುತ್ತಿವೆ.
ಇದುವರೆಗೂ ಕೃತಕ ಬುದ್ಧಿಮತ್ತೆಯ (ಎ.ಐ) ಮಿಮಿಕ್ರಿ, ಒಎಲ್‌ಎಕ್ಸ್, ಬ್ಯಾಂಕ್ ವಹಿವಾಟಿನ ಒನ್ ಟೈಂ ಪಾಸ್‌ವರ್ಡ್(ಒಟಿಪಿ), ಡಿಜಿಟಲ್ ಅರೆಸ್ಟ್ (ಫೋನ್ ಹಾಗೂ ವಿಡಿಯೊ ಕರೆಗಳ ಮೂಲಕ ಗೃಹಬಂಧನ), ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡರೆ, ಹಬ್ಬದ ಗಿಫ್ಟ್‌ಗಳು ಸಿಗಲಿವೆ ಎಂದು ಆಮಿಷವೊಡ್ಡಿ ವಂಚಿಸುತ್ತಿದ್ದ ಸೈಬರ್ ಕಳ್ಳರು, ಕಳೆದ ಕೆಲವು ದಿನಗಳಿಂದ ‘ಸೈಬರ್ ಕಿಡ್ನಾಪ್’ ಅಥವಾ ‘ಡಿಜಿಟಲ್ ಅಪಹರಣ’ದ ಸೋಗಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ದೋಚುತ್ತಿದ್ದಾರೆ.
‘ಮನೆಯ ಸದಸ್ಯರೊಬ್ಬರ ಅಪಹರಣ ಮಾಡಲಾಗಿದೆ’ ಎಂದು ಕರೆ ಬಂದಿತ್ತು ಎಂದು ರಾಜ್ಯದ ವಿವಿಧೆಡೆ ಠಾಣೆಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಕರೆಗಳ ಜಾಡು ಪರಿಶೀಲಿಸಿದಾಗ ಸೈಬರ್ ಕಳ್ಳರ ಹೊಸ ಮಾರ್ಗ ಎಂಬುದು ಬಯಲಾಗಿದೆ' ಎಂದು ಪೊಲೀಸರು ತಿಳಿಸಿದರು.
ಕಳೆದ ಒಂದು ವಾರದಲ್ಲಿ ಬೆಂಗಳೂರಿನ ಹಲವರಿಗೆ ಈ ರೀತಿಯ ಕರೆಗಳು ಬಂದಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಅಲ್ಲದೇ ಈ ರೀತಿಯ ಕರೆಗಳು ಬಂದಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲೂ ಕೆಲವರು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ವಿದೇಶಗಳಲ್ಲಿ ಕುಳಿತು ಕರೆ ಮಾಡುತ್ತಿರುವ ವಂಚಕರು, ‘ನಿಮ್ಮ ಪುತ್ರಿ/ಪುತ್ರ ಅಥವಾ ಕುಟುಂಬದ ಸದಸ್ಯರೊಬ್ಬರನ್ನು ಅಪಹರಿಸಿದ್ದೇವೆ. ಅವರ ಬಿಡುಗಡೆಗೆ ತಕ್ಷಣವೇ ಇಂತಿಷ್ಟು ಹಣ ನೀಡಬೇಕು’ ಎಂದು ಕರೆ ಮಾಡುತ್ತಿದ್ದಾರೆ. ಇನ್ನೂ ಕೆಲವು ವಂಚಕರು, ‘ನಿಮ್ಮ ಮಗು ಅಥವಾ ವೃದ್ಧರೊಬ್ಬರ ಬಂಧನವಾಗಿದೆ’ ಎಂಬುದಾಗಿ ಕರೆ ಮಾಡಿ ಬೆದರಿಸುತ್ತಿದ್ದಾರೆ.
‘ಮಕ್ಕಳನ್ನು ಶಾಲೆಗೆ ಕಳುಹಿಸಿ ಪೋಷಕರು ಕೆಲಸಕ್ಕೆ ತೆರಳಿರುತ್ತಾರೆ ಅಥವಾ ಮನೆಯಲ್ಲೇ ಬೇರೆ ಕೆಲಸಗಳಲ್ಲಿ ಮಗ್ನರಾಗುತ್ತಾರೆ. ಅಂತಹ ಪೋಷಕರನ್ನೇ ಹುಡುಕಿ ವಂಚಕರು ಕರೆ ಮಾಡುತ್ತಿದ್ದಾರೆ. ಕರೆ ಮಾಡುವುದಕ್ಕೂ ಮೊದಲು ಪೋಷಕರ ಪೂರ್ವಾಪರ ಪರಿಶೀಲನೆ ನಡೆಸಿಯೇ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ’ ಎಂದು ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಖಾತ್ರಿ ಪಡಿಸಿಕೊಳ್ಳಿ’: ಅಪರಿಚಿತರಿಂದ ಅಪಹರಣದ ಕರೆಗಳು ಬಂದಾಗ ನಿಮ್ಮ ಕುಟುಂಬದ ಸದಸ್ಯರಿಗೆ ಕರೆ ಮಾಡಿ ಖಾತ್ರಿ ಪಡಿಸಿಕೊಳ್ಳಬೇಕು. ಶಾಲೆಗೂ ಕರೆ ಮಾಡಿ ಮಗುವಿನ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಅವರು ತಿಳಿಸಿದರು.
‘ರಾಜಸ್ಥಾನ, ಬಿಹಾರ, ಜಾರ್ಖಂಡ್ ಹಾಗೂ ವಿದೇಶಗಳಲ್ಲಿ ವಂಚಕರು ಕುಳಿತು ತಂತ್ರಾಂಶ ಬಳಸಿ ಕರೆ ಮಾಡುತ್ತಿದ್ದಾರೆ. ಡಿಜಿಟಲ್ ಅರೆಸ್ಟ್, ಒಟಿಪಿ ವಂಚನೆಯ ಬಗ್ಗೆ ಜನರು ಈಗ ಹೆಚ್ಚು ಜಾಗೃತರಾಗಿದ್ದಾರೆ. ಇದೇ ಕಾರಣಕ್ಕೆ ವಂಚಕರು ಬೇರೆ ದಾರಿಗಳ ಮೂಲಕ ಜನರಿಂದ ಹಣ ದೋಚುತ್ತಿದ್ದಾರೆ. ಅಪಹರಣದ ಭಯ ಹುಟ್ಟಿಸಿದರೆ ತಕ್ಷಣವೇ ಹಣ ನೀಡುತ್ತಾರೆಂದು ವಿನೂತನ ಮಾರ್ಗವನ್ನು ಅನುಸರಿಸುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
-ಮಾಹಿತಿ ಕಲೆಹಾಕಿ ಕಾರ್ಯಾಚರಣೆ
‘ಕೆಲವು ಪ್ರಕರಣಗಳಲ್ಲಿ ಕುಟುಂಬಸ್ಥರ ಸಂಪೂರ್ಣ ಮಾಹಿತಿ ಕಲೆ ಹಾಕಿದ ನಂತರವಷ್ಟೇ ಖದೀಮರು ಕಾರ್ಯಾಚರಣೆಗೆ ಇಳಿಯುತ್ತಿದ್ದಾರೆ. ಕರೆ ಮಾಡಿ ಎಲ್ಲ ಸದಸ್ಯರ ಹೆಸರನ್ನು ಸೈಬರ್ ವಂಚಕರೇ ಹೇಳುತ್ತಾರೆ. ನಂಬುವಂತೆ ಮಾಡುತ್ತಾರೆ. ನಂತರ ತಮ್ಮ ವ್ಯಾಪ್ತಿಯ ಠಾಣೆ ಪೊಲೀಸರೆಂದು ಪರಿಚಯಿಸಿಕೊಳ್ಳುತ್ತಾರೆ. ‘ನಿಮ್ಮ ಮಗು ನಾಪತ್ತೆಯಾಗಿದೆ’ ಎಂದು ಭಯ ಹುಟ್ಟಿಸುತ್ತಾರೆ. ತಾವು ನೀಡುವ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ತಕ್ಷಣವೇ ಮಗುವನ್ನು ಅಪಹರಣಕಾರರಿಂದ ಬಿಡಿಸಿಕೊಂಡು ತಮಗೆ ಒಪ್ಪಿಸುವುದಾಗಿ ಹೇಳಿ ಹಣ ದೋಚುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಅಪಹರಣ ಬೆದರಿಕೆಯ ಕರೆಗಳು ಬಂದಲ್ಲಿ ತಕ್ಷಣವೇ 112ಗೆ ಕರೆ ಮಾಡಬೇಕು ಅಥವಾ ಹತ್ತಿರದ ಪೊಲೀಸ್ ಠಾಣೆಗೂ ತೆರಳಿ ಮಾಹಿತಿ ಕೊಡಬಹುದು.ಅನೂಪ್ ಶೆಟ್ಟಿ, ಎಸ್‌ಪಿ, ಸೈಬರ್ ಕ್ರೈಂ ವಿಭಾಗ ಸಿಐಡಿ
ಅಪರಿಚಿತರ ಬಳಿ ದಾಖಲೆಗಳ ವಿವರವನ್ನು ಹಂಚಿಕೊಳ್ಳಬಾರದು. ಕರೆ ಬಂದಾಗ ಧೈರ್ಯದಿಂದ ಪೊಲೀಸರಿಗೆ ಮಾಹಿತಿ ನೀಡಬೇಕು.ಬಿ.ದಯಾನಂದ, ಬೆಂಗಳೂರು ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.