ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಕಾಯ್ದಿರಿಸಿ ಚಾಲಕರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಲಾಗುತ್ತಿದ್ದು, ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
‘ರ‍್ಯಾಪಿಡೊ ಬೈಕ್ ಟ್ಯಾಕ್ಸಿಯ ಮೂವರು ಚಾಲಕರು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಅಪರಿಚಿತ ಸೈಬರ್ ವಂಚಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಚಾಲಕ ಕುಮಾರ್ ಅವರ ಟ್ಯಾಕ್ಸಿ ಕಾಯ್ದಿರಿಸಿದ್ದ ಆರೋಪಿ, ₹ 4,000 ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಅಂದ್ರಹಳ್ಳಿ ನಿವಾಸಿಯಾಗಿರುವ ಚಾಲಕ ಆನಂದ್, ₹ 12,000 ಕಳೆದುಕೊಂಡಿದ್ದಾರೆ. ಹೇರೋಹಳ್ಳಿಯ ಮಹದೇಶ್ವರ ನಗರ ನಿವಾಸಿ ಭಾನುಪ್ರಕಾಶ್ ಬ್ಯಾಂಕ್ ಖಾತೆಯಿಂದ ಸೈಬರ್ ವಂಚಕರು ₹ 23,000 ವರ್ಗಾಯಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಟ್ಯಾಕ್ಸಿ ಕಾಯ್ದಿರಿಸುವ ವಂಚಕರು, ‘ನಮ್ಮ ಬಳಿಯ ಹಣವನ್ನು ನಿಮ್ಮ ಖಾತೆಗೆ ಹಾಕುತ್ತೇವೆ. ದಯವಿಟ್ಟು ಸ್ನೇಹಿತರು, ಪತ್ನಿ ಹಾಗೂ ಸಂಬಂಧಿಕರಿಗೆ ವರ್ಗಾಯಿಸಿ’ ಎಂದಿದ್ದರು. ಇದಾದ ನಂತರ, ಹಣ ವರ್ಗಾವಣೆಯಾದ ಬಗ್ಗೆ ಚಾಲಕರ ಮೊಬೈಲ್‌ಗೆ ಸಂದೇಶ ಬಂದಿತ್ತು. ಈ ಸಂದೇಶ ನಂಬಿ ಚಾಲಕರು, ಆರೋಪಿಗಳು ಹೇಳಿದ್ದ ಖಾತೆಗಳಿಗೆ ಹಣ ಕಳುಹಿಸಿದ್ದರು. ಆದರೆ, ಚಾಲಕರ ಖಾತೆಗೆ ಯಾವುದೇ ಹಣ ವರ್ಗಾವಣೆ ಆಗಿರಲಿಲ್ಲ. ಸಂದೇಶ ಮಾತ್ರ ಬಂದಿತ್ತು. ನಂತರ ಚಾಲಕರು ಕರೆ ಮಾಡಿದಾಗ, ಆರೋಪಿಗಳ ಮೊಬೈಲ್‌ಗಳು ಸ್ವಿಚ್ ಆಫ್ ಆಗಿವೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.