ಬೆಂಗಳೂರು: ರಾಜ್ಯದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನದ ಕುರಿತು ಜಾಗೃತಿ ಮೂಡಿಸಲು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಕರೆದಾರರ ಗುರುತು (ಕಾಲರ್ ಐಡಿ) ಹಾಗೂ ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವ ತಂತ್ರಾಂಶ ಹೊಂದಿರುವ ಟ್ರೂ ಕಾಲರ್ ಕಂಪನಿಯೊಂದಿಗೆ ಸೋಮವಾರ ಒಪ್ಪಂದ ಮಾಡಿಕೊಂಡಿತು.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಟ್ರೂ ಕಾಲರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಿಷಿತ್ ಜುಂಜುನ್ ವಾಲಾ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಯೋಜನೆಯಡಿ, ಟ್ರೂ ಕಾಲರ್ ಕಂಪನಿಯು ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನ ಕುರಿತು ಜಾಗೃತಿ ಮೂಡಿಸಲು ಸರಣಿ ಕಾರ್ಯಕ್ರಮಗಳನ್ನು ನಡೆಸಲಿದೆ. ಸೈಬರ್ ವಂಚನೆ ತಡೆಗೆ ಕನ್ನಡದಲ್ಲೂ ತರಬೇತಿ ನೀಡಲಿದೆ.
ಒಪ್ಪಂದದ ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ, ‘ಅಮಾಯಕ ನಾಗರಿಕರು ಸೈಬರ್ ವಂಚನೆಯಿಂದ ತೊಂದರೆಗೊಳಗಾಗದಂತೆ ರಕ್ಷಿಸಲು ತರಬೇತಿ ನೀಡುವ ಉದ್ದೇಶವಿದೆ. ಅದಕ್ಕಾಗಿಯೇ ಟ್ರೂ ಕಾಲರ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.