ADVERTISEMENT

ಬೆಂಗಳೂರು | ಅನಿಲ ಸೋರಿಕೆಯಿಂದ ಬೆಂಕಿ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 14:42 IST
Last Updated 24 ಡಿಸೆಂಬರ್ 2023, 14:42 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ತೀವ್ರ ಗಾಯಗೊಂಡಿದ್ದ ಸಂದೇಶ್ (30) ಹಾಗೂ ಅವರ  ಸಹೋದರನ ಎರಡೂವರೆ ವರ್ಷದ ಮಗ ರೋಹನ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

‘ಉತ್ತರ ಪ್ರದೇಶದ ಸಂದೇಶ್, ಪತ್ನಿ ಹಾಗೂ ಸಹೋದರನ ಕುಟುಂಬ ಸಮೇತ ನಗರಕ್ಕೆ ಬಂದಿದ್ದರು. ಗಾರ್ವೆಬಾವಿಪಾಳ್ಯ ಬಳಿಯ ಲಕ್ಷ್ಮಿ ಬಡಾವಣೆಯಲ್ಲಿ ವಾಸವಿದ್ದರು. ಡಿ. 19ರಂದು ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಸಂದೇಶ್, ಅವರ ನಾದಿನಿ ನಿಖಿಲಾ, ಅವರ ಮಕ್ಕಳಾದ ರೋಹನ್, ರೋಷನ್, ರೋಹಿಣಿ ತೀವ್ರ ಗಾಯಗೊಂಡಿದ್ದರು’ ಎಂದು ಬೇಗೂರು ಠಾಣೆ ಪೊಲೀಸರು ಹೇಳಿದರು.

ADVERTISEMENT

‘ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಸುಟ್ಟ ಗಾಯಗಳಾಗಿದ್ದ ಸಂದೇಶ್ ಹಾಗೂ ರೋಹನ್ ಆಸ್ಪತ್ರೆಯಲ್ಲಿ ಭಾನುವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ. ನಿಖಿಲಾ, ಮಕ್ಕಳಾದ ರೋಷನ್ ಹಾಗೂ ರೋಹಿಣಿ ಆರೋಗ್ಯ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದು ತಿಳಿಸಿದರು.

ಭದ್ರತೆ ಕೆಲಸ

‘ಸಂದೇಶ್ ಹಾಗೂ ಅವರ ಸಹೋದರ, ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಪ್ರತ್ಯೇಕ ಪಾಳಿಯಲ್ಲಿ ಕೆಲಸವಿತ್ತು. ಸಂದೇಶ್ ಪತ್ನಿ ಸಹ ಕಂಪನಿಯೊಂದರಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದರು. ಎರಡೂ ಕುಟುಂಬದ ಸದಸ್ಯರು, ಅಕ್ಕ– ಪಕ್ಕದ ಕೊಠಡಿಗಳಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.

‘ಡಿ. 18ರಂದು ಸಂದೇಶ್ ಅವರ ಪತ್ನಿ ಊರಿಗೆ ಹೋಗಿದ್ದರು. ಸಹೋದರ ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದರು. ಸಂದೇಶ್ ಹಾಗೂ ಸಹೋದರನ ಪತ್ನಿ ನಿಖಿಲಾ, ಮಕ್ಕಳು ಮಾತ್ರ ಮನೆಯಲ್ಲಿದ್ದರು. ಅಡುಗೆ ಅನಿಲ ಸಿಲಿಂಡರ್ ಆಫ್ ಮಾಡದೇ ಮಲಗಿದ್ದರು. ಕಿಟಕಿಗಳನ್ನೂ ಮುಚ್ಚಿದ್ದರು. ರಾತ್ರಿ ಅಡುಗೆ ಅನಿಲ ಸೋರಿಕೆಯಾಗಿ ಕೊಠಡಿಯಲ್ಲಿ ಆವರಿಸಿತ್ತು’ ಎಂದು ತಿಳಿಸಿದರು.

‘ಡಿ. 19ರಂದು ಬೆಳಿಗ್ಗೆ 6 ಗಂಟೆಗೆ ಎದ್ದಿದ್ದ ಸಂದೇಶ್, ವಿದ್ಯುತ್ ಸ್ವಿಚ್ ಒತ್ತಿದ್ದರು. ಬೆಂಕಿ ಕಿಡಿ ಹೊತ್ತಿಕೊಂಡು ಇಡೀ ಕೊಠಡಿಯಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿತ್ತು. ಸಂದೇಶ್ ಹಾಗೂ ಕೊಠಡಿ ಬಳಿಯೇ ಮಲಗಿದ್ದ ನಿಖಿಲಾ, ಅವರ ಮಕ್ಕಳು ತೀವ್ರ ಗಾಯಗೊಂಡಿದ್ದರು. ರಕ್ಷಣೆಗೆ ಹೋಗಿದ್ದ ಸ್ಥಳೀಯರು, ಐವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದರು. ಬೆಂಕಿ ಅವಘಡದಿಂದ ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿದ್ದವು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.