ADVERTISEMENT

ಡಿ.ಜೆ.ಹಳ್ಳಿ ಗಲಭೆ: ಪೋಸ್ಟ್ ನೆಪದಲ್ಲಿ ಶಾಸಕರ ಮನೆಗೆ ಬೆಂಕಿ

400 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ l 3 ತಿಂಗಳಿನಿಂದ ಸಂಚು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 20:50 IST
Last Updated 15 ಅಕ್ಟೋಬರ್ 2020, 20:50 IST
ಶಾಸಕ ಅಖಂಡ ಶ್ರೀನಿವಾಸಮೂರ್ತಿ
ಶಾಸಕ ಅಖಂಡ ಶ್ರೀನಿವಾಸಮೂರ್ತಿ   

ಬೆಂಗಳೂರು: ‘ತ್ರಿವಳಿ ತಲಾಖ್ ರದ್ದು, ಎನ್‌ಆರ್‌ಸಿ ಹಾಗೂ ರಾಮಮಂದಿರ ಗುದ್ದಲಿ ಪೂಜೆ ಸೇರಿ ಹಲವು ವಿಷಯಗಳಲ್ಲಿ ಅಸಮಾಧಾನಗೊಂಡಿದ್ದ ಆರೋಪಿಗಳು, ದೊಡ್ಡ ಮಟ್ಟದಲ್ಲಿ ಗಲಾಟೆ ಸೃಷ್ಟಿಸಲು ಮೂರು ತಿಂಗಳಿನಿಂದ ಸಂಚು ರೂಪಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಹರಿದಾಡಿದ ಪೋಸ್ಟ್‌ ನೆಪ ಮಾಡಿಕೊಂಡು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದರು.’

ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿರುವ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಆ. 11ರಂದು ರಾತ್ರಿ ಬೆಂಕಿ ಹಚ್ಚಿದ್ದ ಪ್ರಕರಣದ ತನಿಖೆ ಮುಗಿಸಿರುವ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ 400 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಸ್ಥಳೀಯ ಕಾಂಗ್ರೆಸ್ ಮುಖಂಡ ಸಂಪತ್ ರಾಜ್, ಜಾಕೀರ್ ಸೇರಿದಂತೆ ಹಲವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಘಟನೆಗೆ ಕಾರಣವೇನು ಎಂಬುದನ್ನು ಪೊಲೀಸರು ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಧರ್ಮ ರಕ್ಷಣೆ ಹೆಸರಿನಲ್ಲಿ ಪ್ರಚೋದನೆ: ‘ಸಿಎಆರ್ ಹಾಗೂ ಎನ್‌ಆರ್‌ಸಿ ವಿರುದ್ಧ ಸ್ಥಳೀಯವಾಗಿ ಹೋರಾಟಗಳು ನಡೆದಿದ್ದವು. ದೊಡ್ಡ ಮಟ್ಟದ ಗಲಾಟೆ ಸೃಷ್ಟಿಸಲು ಮುಂದಾಗಿದ್ದ ಮತೀಯವಾದಿಗಳು, ಗಲಭೆಗೂ ಮೂರು ತಿಂಗಳು ಮುಂಚೆಯಿಂದಲೇ ಮುಸ್ಲಿಂ ಸಮುದಾಯದವರನ್ನು ಒಟ್ಟಿಗೆ ಸೇರಿಸಿ ಹಸೀನಾ ಹಾಲ್‌ನಲ್ಲಿ ಸಭೆ ಮಾಡಲಾರಂಭಿಸಿದ್ದರು. ಧರ್ಮ ರಕ್ಷಣೆ ಮಾಡಬೇಕು ಹಾಗೂ ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧವಾಗಬೇಕೆಂದು ಹೇಳಿ ಧರ್ಮದ ಹೆಸರಿನಲ್ಲಿ ಪ್ರಚೋದಿಸಲಾರಂಭಿಸಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

‘ಅಖಂಡ ಶ್ರೀನಿವಾಸಮೂರ್ತಿ ಅವರನ್ನು ರಾಜಕೀಯವಾಗಿ ಮುಗಿಸಲು ಸಂಪತ್ ರಾಜ್, ಜಾಕೀರ್ ಹಾಗೂ ಇತರರರು ಸಂಚು ರೂಪಿಸುತ್ತಿದ್ದರು. ಅದೇ ಸಮಯದಲ್ಲೇಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್, ಇಸ್ಲಾಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಅದನ್ನೇ ನೆಪವಾಗಿಟ್ಟುಕೊಂಡ ಮತೀಯವಾದಿಗಳು ಹಾಗೂ ರಾಜಕೀಯ ವಿರೋಧಿಗಳು, ತಮ್ಮ ರಾಜಕೀಯ ಲಾಭಕ್ಕಾಗಿ ಮುಸ್ಲಿಂ ಸಮುದಾಯದವರನ್ನು ಪ್ರಚೋದಿಸಿ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಆಗಸ್ಟ್ 11ರಂದು ರಾತ್ರಿ ಬೆಂಕಿ ಹಚ್ಚುವಂತೆ ಮಾಡಿದ್ದರು’ ಎಂಬ ಸಂಗತಿಯೂ ಪಟ್ಟಿಯಲ್ಲಿದೆ.

‘ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದ ಆರೋಪಿಗಳು, ಸಂಪತ್‌ ರಾಜ್ ಹಾಗೂ ಇತರರ ಸೂಚನೆಯಂತೆ ಮನೆಯೊಳಗೆ ನುಗ್ಗಿದ್ದರು. ₹11.50 ಲಕ್ಷ ನಗದು, ₹50 ಲಕ್ಷ ಮೌಲ್ಯದ ಚಿನ್ನಾಭರಣ, ಕಂಪ್ಯೂಟರ್‌ಗಳನ್ನು ದೋಚಿದ್ದರು. ನಂತರ ಮನೆಗೆಲ್ಲ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ₹3 ಕೋಟಿಗೂ ಹೆಚ್ಚು ನಷ್ಟವಾಗಿದೆ’ ಎಂಬುದಾಗಿ ಪಟ್ಟಿಯಲ್ಲಿ ತಿಳಿಸಲಾಗಿದೆ.

‘ಕೃತ್ಯದ ಬಗ್ಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದ ತನಿಖೆ ನಡೆಸಿ ಈ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಆರೋಪಿಗಳು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೂರಕ ಸಾಕ್ಷ್ಯಗಳು ಲಭ್ಯವಾಗಿವೆ’ ಎಂದೂ ಉಲ್ಲೇಖಿಸಲಾಗಿದೆ.

ಕ್ಷಣ ಕ್ಷಣಕ್ಕೂ ಸೂಚನೆ

‘ಪೋಸ್ಟ್ ಬಗ್ಗೆ ಗೊತ್ತಾಗುತ್ತಿದ್ದಂತೆ ಸಂಪತ್‌ ರಾಜ್ ಹಾಗೂ ಇತರರು, ಶಾಸಕರ ಮನೆ ಎದುರು ಪ್ರತಿಭಟನೆ ನಡೆಸಲು ಜನರನ್ನು ಪ್ರಚೋದಿಸುತ್ತಿದ್ದರು. ಕ್ಷಣ ಕ್ಷಣಕ್ಕೂ ಸೂಚನೆಗಳನ್ನು ನೀಡುತ್ತಿದ್ದರು’ ಎಂದು ಸಂಪತ್‌ ರಾಜ್ ಆಪ್ತ ಸಹಾಯಕ ಅರುಣ್‌ಕುಮಾರ್ ನೀಡಿರುವ ಹೇಳಿಕೆಯನ್ನೂ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.