ADVERTISEMENT

ಬೆಂಗಳೂರು: 14,307 ರಸ್ತೆ ಗುಂಡಿ ದುರಸ್ತಿ; ನಗರ ಸಂಚಾರ ಮಾಡಿ ಡಿಕೆಶಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 22:02 IST
Last Updated 23 ಸೆಪ್ಟೆಂಬರ್ 2024, 22:02 IST
<div class="paragraphs"><p>ಜಯಮಹಲ್ ರಸ್ತೆಯಲ್ಲಿನ ಗುಂಡಿ ಮುಚ್ಚಿದ ಜಾಗದಲ್ಲಿ ಹಾರೆ ಪೆಟ್ಟು ಹಾಕಿ ಡಿಸಿಎಂ ಡಿ.ಕೆ. ಶಿವಕುಮಾರ್ ಪರಿಶೀಲಿಸಿದರು</p></div>

ಜಯಮಹಲ್ ರಸ್ತೆಯಲ್ಲಿನ ಗುಂಡಿ ಮುಚ್ಚಿದ ಜಾಗದಲ್ಲಿ ಹಾರೆ ಪೆಟ್ಟು ಹಾಕಿ ಡಿಸಿಎಂ ಡಿ.ಕೆ. ಶಿವಕುಮಾರ್ ಪರಿಶೀಲಿಸಿದರು

   

ಬೆಂಗಳೂರು: ' ನಗರದಲ್ಲಿ ಎಲ್ಲೂ ರಸ್ತೆ ಗುಂಡಿಗಳು ಇರಬಾರದು. ಯಾರಿಗೂ ಅಪಾಯ ಆಗಬಾರದು ಎಂಬುದು ನಮ್ಮ ಕಾಳಜಿ' ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ತಿಳಿಸಿದರು.

ರಸ್ತೆ ಗುಂಡಿಗಳ ದುರಸ್ತಿಯನ್ನು ಪರಿಶೀಲಿಸಲು ಸೋಮವಾರ ತಡರಾತ್ರಿ ನಗರ ಸಂಚಾರ ಆರಂಭಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

‘ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ 400 ಅಧಿಕಾರಿಗಳು, ಎಂಜಿನಿಯರ್‌ಗಳಿಗೆ ರಸ್ತೆಗಿಳಿದು ಗುಂಡಿ ಮುಚ್ಚಲು ಸೂಚಿಸಿದ್ದೆ. 15 ದಿನ ಗಡುವು ನೀಡಿದ್ದೆ. 14,307 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ವರದಿ ನೀಡಿದ್ದಾರೆ. ಅದನ್ನು ರಸ್ತೆಗಳಲ್ಲಿ ಸಂಚರಿಸಿ ನಾನೇ ಪರಿಶೀಲಿಸುತ್ತಿದ್ದೇನೆ' ಎಂದು ತಿಳಿಸಿದರು.

‘ನಗರದಲ್ಲಿ ಈ ಹಿಂದೆ ರಸ್ತೆ ಹೇಗಿತ್ತು, ಈಗ ಹೇಗಿವೆ ಎಂಬ ವರದಿ ನೀಡಿದ್ದಾರೆ. ಇದು ಒಂದು ದಾಖಲೆಯ ಕೆಲಸ. ಹೀಗಿದ್ದರೂ ರಸ್ತೆ ಗುಂಡಿ ದುರಸ್ತಿ ಮಾಡುವಲ್ಲಿ ಯಾರಾದರೂ ನಿರ್ಲಕ್ಷ್ಯ ತೋರಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ನಾನು ಮುಖ್ಯ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.
‘ಬಿಬಿಎಂಪಿ ಅಧಿಕಾರಿಗಳು ನೀಡಿರುವ ವರದಿಯನ್ನು ನಾನು ಒಪ್ಪುವುದಿಲ್ಲ.ನಾನೇ ಪರಿಶೀಲನೆ ಮಾಡುತ್ತೇನೆ. ಇದು ಮೊದಲ ಹಂತ. ನನ್ನ ಕಾಲೇಜಿನ ಸಮಯದ ಬೈಕ್ ಸಿದ್ಧ ಮಾಡಿಸಿದ್ದೇನೆ. ಅದರಲ್ಲೂ ನಗರ ಸಂಚಾರ ಮಾಡುತ್ತೇನೆ’ ಎಂದರು.ಕೆಲವು ರಸ್ತೆಗಳಲ್ಲಿ ಗುಂಡಿ ದುರಸ್ತಿಯನ್ನು ಹಾರೆಯಲ್ಲಿ ಅಗೆದು ಶಿವಕುಮಾರ್ ಪರಿಶೀಲನೆ ಮಾಡಿದರು.

ಸದಾಶಿವನಗರ, ಜಯಮಹಲ್, ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ಟ್ರಿನಿಟಿ ವೃತ್ತ, ದೊಮ್ಮಲೂರು, ಹಳೆ ವಿಮಾನ ರಸ್ತೆ, ರಿಚ್ಮಂಡ್ ರಸ್ತೆ, ಮಾರೇನಹಳ್ಳಿ, ಬನಶಂಕರಿ, ಮೈಸೂರು ಜಂಕ್ಷನ್, ವಿಜಯನಗರ, ಡಾ. ರಾಜಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆಗಳಲ್ಲಿ ಶಿವಕುಮಾರ್ ರಸ್ತೆ ಗುಂಡಿ ದುರಸ್ತಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.