ADVERTISEMENT

ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಸಿಬಿಐ ಬಾಯಿ ಮುಚ್ಚಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 16:13 IST
Last Updated 13 ಜುಲೈ 2023, 16:13 IST
 ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ, ಅಕ್ರಮ ಆಸ್ತಿ ವಿವರವನ್ನು ತೆರೆದ ನ್ಯಾಯಾಲಯದಲ್ಲಿ ವಿವರಿಸಲು ಮುಂದಾದ ಸಿಬಿಐ ಬಾಯಿ ಮುಚ್ಚಿಸಿದ ಪ್ರಸಂಗಕ್ಕೆ ಹೈಕೋರ್ಟ್ ಸಾಕ್ಷಿಯಾಯಿತು.

ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದ ಎಫ್.ಐ.ಆರ್ ರದ್ದುಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ಶಿವಕುಮಾರ್ ಅವರು ಎಷ್ಟು ಕೋಟಿ ಹಣ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ವಿವರಿಸಲು ಮುಂದಾದರು.

ADVERTISEMENT

ಅದರೆ, ನ್ಯಾಯಮೂರ್ತಿ ಕೆ‌.ನಟರಾಜನ್ ಅವರು ಪ್ರಸನ್ನ ಕುಮಾರ್ ಬಾಯಿ ಕಟ್ಟಿ ಹಾಕಿದರಲ್ಲದೆ, ‘ನೀವು ಈ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ನೀಡಿದ್ದೀರಿ‌.‌ ಇದರ ಮುಖ್ಯಾಂಶದ ಪ್ಯಾರಾ ಸಂಖ್ಯೆ 3.15ರಲ್ಲಿ ಏನಿದೆ ಎಂಬುದು ಗೋಪ್ಯ ಅಲ್ಲವೇ?’ ಎಂದು ಪ್ರಶ್ನಿಸಿದರು.

ಏನಿದೆ?:

ಮುಚ್ಚಿದ ಲಕೋಟೆಯಲ್ಲಿ, ‘ಹೈಕೋರ್ಟ್ ತನಿಖೆಗೆ ತಡೆ ನೀಡುವವರೆಗಿನ ತನಕ ಎಷ್ಟಿದೆ. ಈ ಅವಧಿಯಲ್ಲಿ ಫಾರಂ 1ರಿಂದ 6ರ ಕಾಲಂ ಅನುಸಾರದ ಹೇಳಿಕೆಯನ್ನು 11 ಸಂಪುಟಗಳಲ್ಲಿ ಸಲ್ಲಿಸಲಾಗಿದೆ. 2,412 ಪುಟಗಳ ಈ ದಾಖಲೆ ಪರಿಶೀಲನೆ ನಡೆಯುತ್ತಿದೆ’ ಎಂದು ಸಿಬಿಐ ವಕೀಲರು ತಿಳಿಸಿದರು.

‘ದಾಖಲೆ ಪರಿಶೀಲನೆ ಹೊರತಾಗಿ 596 ದಾಖಲೆ ಸಂಗ್ರಹ ಮಾಡಿದ್ದೇವೆ. 84 ಜನ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ’ ಎಂದು ವಿವರಿಸಿದರು.

ಪ್ರಕರಣವೇನು?

ಶಿವಕುಮಾರ್ ಅವರು 2013ರಿಂದ 2018ರ ಮಧ್ಯದ ಅವಧಿಯಲ್ಲಿ ತಮ್ಮ ಆದಾಯಕ್ಕೂ ಮೀರಿದ ಸಂಪತ್ತು ಗಳಿಸಿದ್ದಾರೆ ಎಂದು ಆರೋಪಿಸಿ ಸಿಬಿಐ, ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.