ADVERTISEMENT

ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ಜಲಕ್ಷಾಮ

ನದಿ ನೀರಿನ ಸಂಪರ್ಕವೂ ಇಲ್ಲ, ಕೊಳವೆಬಾವಿ ಕೊರೆಸಲೂ ಅವಕಾಶವಿಲ್ಲ l ಒಳಚರಂಡಿ ವ್ಯವಸ್ಥೆಯೂ ಇಲ್ಲ l ಕೈಗಾರಿಕೆ ನಡೆಸುವುದೇ ದೊಡ್ಡ ಸವಾಲು

ವಿಜಯಕುಮಾರ್ ಎಸ್.ಕೆ.
Published 15 ಮಾರ್ಚ್ 2020, 21:44 IST
Last Updated 15 ಮಾರ್ಚ್ 2020, 21:44 IST
ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ನಕ್ಷೆ
ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ನಕ್ಷೆ   
""
""

ಬೆಂಗಳೂರು: ನಗರದ ಹೊರ ವಲಯಕ್ಕೆ ಕೈಗಾರಿಕಾ ಪ್ರದೇಶ ವಿಸ್ತರಿಸುವ ಉದ್ದೇಶದಿಂದ ದಾಬಸ್‌ಪೇಟೆ ಸಮೀಪ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶದಲ್ಲಿ ಈಗ ಅಕ್ಷರಶಃ ಜಲಕ್ಷಾಮ ಎದುರಾಗಿದೆ. ಮೂಲಸೌಕರ್ಯ ಮರೀಚಿಕೆಯಾಗಿ ರುವ ಈ ಪ್ರದೇಶದಲ್ಲಿ ಅತ್ತ ನದಿ ನೀರಿನ ಸಂಪರ್ಕವೂ ಇಲ್ಲ, ಇತ್ತ ಕೊಳವೆ ಬಾವಿ ಕೊರೆಸುವುದಕ್ಕೆ ಅವಕಾಶವೂ ಇಲ್ಲ. ಸಮರ್ಪಕ ಸಾರಿಗೆ ವ್ಯವಸ್ಥೆಯೂ ಇಲ್ಲಿಲ್ಲ.

ದಾಬಸ್‌ ಪೇಟೆಯಲ್ಲಿ ಮೊದಲು 540 ಎಕರೆ ಜಾಗವನ್ನು ರೈತರಿಂದ ಸ್ವಾಧೀನ ಪಡಿಸಿಕೊಂಡು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲಾಯಿತು. ಬಳಿಕ ಸೋಂಪುರ ಮತ್ತು ಅವೇರಹಳ್ಳಿ ವ್ಯಾಪ್ತಿ ಯಲ್ಲಿ 1ರಿಂದ 5ನೇ ಹಂತಗಳ ತನಕ ಈ ಪ್ರದೇಶವನ್ನು ವಿಸ್ತರಿಸಲಾಯಿತು. ಕೈಗಾರಿಕೆ ಆರಂಭಿಸಲು ಎಕರೆಗೆ ₹57 ಲಕ್ಷ ಪಾವತಿಸಿ ಜಾಗ ಖರೀದಿಸಿರುವ ಉದ್ಯಮಿಗಳು ಈಗ ನೀರಿನ ಬವಣೆ ಎದುರಿಸುತ್ತಿದ್ದಾರೆ. ಉದ್ಯಮಿಯಾಗುವ ಕನಸು ಹೊತ್ತು ಇಲ್ಲಿ ಅರ್ಧ ಎಕರೆಯಿಂದ ಐದು ಎಕರೆಗಳಷ್ಟು ಜಾಗ ಖರೀದಿಸಿದವರಿಗೆ ನೀರಿಲ್ಲದೆ ಬೆಂದ ಕಾಡಿನಂತಾಗಿರುವ ಈ ಪ್ರದೇಶದಲ್ಲಿ ಕೈಗಾ ರಿಕೆ ನಡೆಸುವುದು ದೊಡ್ಡ ಸವಾಲಾಗಿದೆ.

‘ಹೇಮಾವತಿ ನದಿ ನೀರು ತರಲಾಗುತ್ತಿದೆ ಎಂದು ಭರವಸೆ ನೀಡಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ), ಅದಕ್ಕಾಗಿ ಒಬ್ಬೊಬ್ಬರಿಂದ ₹10 ಲಕ್ಷದಿಂದ ₹12 ಲಕ್ಷದವರೆಗೆ ಹಣ ಪಡೆದುಕೊಂಡಿದೆ. 2003ರಿಂದ ಈವರೆಗೆ ಅದು ಭರವಸೆ ಯಾಗಿ ಉಳಿದಿದೆಯೇ ವಿನಃ, ಇಲ್ಲಿಗೆ ನೀರು ಮಾತ್ರ ಹರಿದಿಲ್ಲ‌’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಉದ್ಯಮಿಗಳು.

ADVERTISEMENT

‘ಅಂತರ್ಜಲ ಮಟ್ಟ ಕುಸಿತಗೊಂಡಿ ರುವ ಕಾರಣ ಇಲ್ಲಿ ಕೊಳವೆ ಬಾವಿ ಕೊರೆಯಿಸಿದರೂ ಪ್ರಯೋಜನ ವಾಗುತ್ತಿಲ್ಲ. ಇನ್ನೊಂದೆಡೆ ಅದಕ್ಕೆ ಅನು ಮತಿಯೂ ದೊರೆಯುತ್ತಿಲ್ಲ. ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದತ್ತ ಕೈ ತೋರಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ನೀರು ಪೂರೈಸುವ ಭರವಸೆ ನೀಡುತ್ತಲೇ ಬಂದಿವೆ. ಆದರೂ ನೀರು ಬಂದಿಲ್ಲ’ ಎಂದು ಉದ್ಯಮಿಗಳು ನೋವು ತೋಡಿ ಕೊಳ್ಳುತ್ತಾರೆ.

‘ಇಲ್ಲಿ ನೀರಿನ ಸಮಸ್ಯೆಯಷ್ಟೇ ಅಲ್ಲ; ಒಳಚರಂಡಿ ವ್ಯವಸ್ಥೆಯೂ ಇಲ್ಲ. ಇಡೀ ಕೈಗಾರಿಕಾ ಪ್ರದೇಶದಲ್ಲಿ ಒಂದೇ ಒಂದು ಶೌಚ ಸಂಸ್ಕರಣಾ ಘಟಕ (ಎಸ್‌ಟಿಪಿ) ಇಲ್ಲ. ಕೈಗಾರಿಕೆಗಳ ಆವರಣದಲ್ಲೇ ಗುಂಡಿಗಳನ್ನು (ಪಿಟ್‌) ನಿರ್ಮಿಸಿ ಶೌಚ ವಿಲೇ ಮಾಡುವ ಅವೈಜ್ಞಾನಿಕ ಪದ್ಧತಿಯನ್ನು 21ನೇ ಶತಮಾನದಲ್ಲೂ ಅನುಸರಿಸುವಂತೆ ಇಲ್ಲಿನ ಉದ್ಯಮಿಗಳಿಗೆ ಸೂಚಿಸಲಾಗಿದೆ. ಇದು ಕೈಗಾರಿಕೆಗಳ ಆವರಣದ ಜತೆಗೆ ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದು ಕೆಐಎಡಿಬಿ ವಿರುದ್ಧ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ಇಲ್ಲಿ ಜಾಗ ಖರೀದಿಸಿರುವ ಅನೇಕ ಉದ್ಯಮಿಗಳು ಮೂಲಸೌಕರ್ಯ ಕೊರತೆಯ ಕಾರಣಕ್ಕೆ ಕೈಗಾರಿಕೆ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. 800ಕ್ಕೂ ಹೆಚ್ಚು ಮಂದಿ ಜಾಗ ಖರೀದಿಸಿದ್ದರೂ, 300 ಕೈಗಾರಿಕೆಗಳು ಮಾತ್ರ ಆರಂಭವಾಗಿವೆ. ಮೂಲಸೌಕರ್ಯವನ್ನೇ ಒದಗಿಸದಿದ್ದರೆ, ಕೈಗಾರಿಕೆಗಳನ್ನು ನಡೆಸುವುದಾದರೂ ಹೇಗೆ’ ಎಂಬುದು ಅವರ ಪ್ರಶ್ನೆ.

ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ (ಪ್ರಜಾವಾಣಿ ಚಿತ್ರ: ಇರ್ಷಾದ್ ಮಹಮದ್)

ಹೇಮಾವತಿ ನದಿಯಿಂದ ನೀರು ಪೂರೈಸುವ ಭರವಸೆ ನೀಡಿ ಜಾಗ ಹಂಚಿಕೆಯನ್ನು ಕೆಐಎಡಿಬಿ ಮಾಡಿದೆ. ಅದಕ್ಕೂ ಹಣ ಕಟ್ಟಿಸಿಕೊಳ್ಳಲಾಗಿದೆ. ಆದರೆ, ನೀರು ನೀಡದೆ ಸತಾಯಿಸಲಾಗುತ್ತಿದೆ ಎನ್ನುತ್ತಾರೆನೆಲಮಂಗಲ ಕೈಗಾರಿಕಾ ಸಂಘದ ಅಧ್ಯಕ್ಷ ಎಸ್‌.ಕಂಠಪ್ಪ.

ನದಿ ನೀರನ್ನೂ ಪೂರೈಸುತ್ತಿಲ್ಲ. ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿಯನ್ನೂ ನೀಡುತ್ತಿಲ್ಲ. ಒಳಚರಂಡಿ ವ್ಯವಸ್ಥೆ ಕೂಡ ಇಲ್ಲದೆ ಉದ್ಯಮಿಗಳು ಪರಿತಪಿಸುವಂತಾಗಿದೆ ಎನ್ನುವುದುಕೈಗಾರಿಕೋದ್ಯಮಿಎನ್‌.ಆರ್.ಜಗದೀಶ್‌ ಅವರ ಅಭಿಪ್ರಾಯ.

ಬಸ್ ವ್ಯವಸ್ಥೆಯೇ ಇಲ್ಲ

60 ಸಾವಿರಕ್ಕೂ ಹೆಚ್ಚು ಕಾರ್ಮಿಕರಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲವೇ ಇಲ್ಲ.

ರಾಷ್ಟ್ರೀಯ ಹೆದ್ದಾರಿ ತನಕ ಮಾತ್ರ ಬಸ್‌ ವ್ಯವಸ್ಥೆ ಇದೆ. ಅಲ್ಲಿಂದ ಮುಂದಕ್ಕೆ ಕೈಗಾರಿಕೆಗಳನ್ನು ತಲುಪಲು ಜನ ಹರಸಾಹಸ ಪಡಬೇಕಿದೆ. ಬಸ್ ಸೌಕರ್ಯ ಕಲ್ಪಿಸುವಂತೆ ಬಿಎಂಟಿಸಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ದೂರುತ್ತಾರೆ ಇಲ್ಲಿನ ಕಾರ್ಮಿಕರು.

ಗೂಡ್ಸ್ ಆಟೋರಿಕ್ಷಾಗಳಲ್ಲಿ ಬಂದು ಕೈಗಾರಿಕೆಗಳನ್ನು ಸೇರಿಕೊಳ್ಳುತ್ತಿದ್ದೆವು. ಅವುಗಳಲ್ಲಿ ಜನ ಸಾಗಿಸದಂತೆ ಸಾರಿಗೆ ಇಲಖೆ ಅಧಿಕಾರಿಗಳು ದಂಡ ಹಾಕಿದರು. ಅಂದಿನಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಸಾವಿರಾರು ಕಾರ್ಮಿಕರು ನಿತ್ಯ ಸಂಚರಿಸುವ ಈ ಪ್ರದೇಶಕ್ಕೆ ಬಸ್ ಸೌಕರ್ಯ ಕಲ್ಪಿಸಲು ಸಾರಿಗೆ ಸಂಸ್ಥೆಗಳು ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸುತ್ತಾರೆ.

‘ಬಸ್ ವ್ಯವಸ್ಥೆಯೇ ಇಲ್ಲದಿದ್ದರೆ ಅಗಲವಾದ ರಸ್ತೆಗಳಿಂದ ಪ್ರಯೋಜನ ಏನು’ ಎಂದು ಅವರು ಪ್ರಶ್ನಿಸಿದರು.

ಜಗದೀಶ್ ಎನ್.ಆರ್.

ಕಳ್ಳರು, ಸುಲಿಗೆಕೋರರ ತಾಣ

ಕಾನೂನು ಸುವ್ಯವಸ್ಥೆ ಸಮಸ್ಯೆಯೂ ಈ ಕೈಗಾರಿಕಾ ಪ್ರದೇಶವನ್ನು ಕಾಡುತ್ತಿದೆ. ಸಂಜೆಯಾದರೆ ಕಾರ್ಮಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುವ ಕಳ್ಳರ ತಂಡಗಳೂ ಇಲ್ಲಿವೆ. ಗಸ್ತು ತಿರುಗಲು ಹೆಚ್ಚುವರಿ ವಾಹನ ಇಲ್ಲ ಎಂದು ದಾಬಸ್‌ಪೇಟೆ ಪೊಲೀಸ್ ಠಾಣೆಯ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇಲ್ಲಿನ ಕೈಗಾರಿಕಾ ಸಂಘದಿಂದಲೇ ಜೀಪ್‌ ಖರೀದಿ ಮಾಡಿ ಠಾಣೆಗೆ ನೀಡಲು ಸಿದ್ಧತೆ ನಡೆದಿದೆ. ಪೊಲೀಸ್ ಸಿಬ್ಬಂದಿ ಜತೆಗೆ ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ಒದಗಿಸಲು ಸಿದ್ಧರಿದ್ದೇವೆ. ಒಟ್ಟಿನಲ್ಲಿ ಕಳ್ಳತನ, ಸುಲಿಗೆ ನಿಲ್ಲಬೇಕು ಎಂದು ಕೈಗಾರಿಕಾ ಸಂಘದ ಅಧ್ಯಕ್ಷ ಎಸ್. ಕಂಠಪ್ಪ ತಿಳಿಸಿದರು.

ರೈಲುಗಳ ನಿಲುಗಡೆ ಬೇಕು

ದಾಬಸ್‌ಪೇಟೆ ಸಮೀಪ ಇರುವ ನಿಡವಂದ ರೈಲು ನಿಲ್ದಾಣದಲ್ಲಿ ಎರಡು ಮೂರು ರೈಲುಗಳ ನಿಲುಗಡೆಗೆ ಮಾತ್ರ ಅವಕಾಶ ಇದೆ.

ಬೆಂಗಳೂರು–ಹುಬ್ಬಳ್ಳಿ ನಡುವಿನ ಪ್ರಮುಖ ರೈಲು ಮಾರ್ಗ ಇದಾಗಿರುವ ಕಾರಣ ಸಾಕಷ್ಟು ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ನಿಡವಂದ ನಿಲ್ದಾಣದಲ್ಲಿ ಇನ್ನಷ್ಟು ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಿದರೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಅನುಕೂಲವಾಗಲಿದೆ. ಈ ಬಗ್ಗೆಯೂ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಎಸ್. ಕಂಠಪ್ಪ ವಿವರಿಸಿದರು.

ಬೇಕಿದೆ ಇಎಸ್‌ಐ ಆಸ್ಪತ್ರೆ: 60 ಸಾವಿರ ಕಾರ್ಮಿಕರಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಇಎಸ್‌ಐ ಆಸ್ಪತ್ರೆಯೇ ಇಲ್ಲ. ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದರೆ ಸರ್ಕಾರಿ ಆಸ್ಪತ್ರೆ ಅಥವಾ ಬೆಂಗಳೂರಿನ ದೊಡ್ಡ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗಬೇಕಿದೆ ಎಂದರು.

‌ಅಂಕಿ–ಅಂಶ

ಕೈಗಾರಿಕಾ ಪ್ರದೇಶದ ಒಟ್ಟು ವಿಸ್ತೀರ್ಣ4,170 ಎಕರೆ,800 ಉದ್ಯಮಿಗಳು ಪ್ರಸ್ತುತಜಾಗ ಖರೀದಿಸಿದ್ದಾರೆ.350 ಕೈಗಾರಿಕೆಗಳು ಸದ್ಯ ನಡೆಯುತ್ತಿರುವೆ.

ಯಾವ ಹಂತದಲ್ಲಿ ಎಷ್ಟು ಎಕರೆ

540 ಎಕರೆ:ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ,1,340 ಎಕರೆ:ಸೋಂಪುರ 1ರಿಂದ 3ನೇ ಹಂತ,890 ಎಕರೆ:ಸೋಂಪುರ 4ನೇ ಹಂತ, 1,400 ಎಕರೆ: ಸೋಂಪುರ 5ನೇ ಹಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.