ದಾಬಸ್‌ಪೇಟೆ: ಮಾಸಿದ ಕಟ್ಟಡದ ಬಣ್ಣ, ಕಟ್ಟಡದ ಸುತ್ತಲೂ ಬೆಳೆದ ಗಿಡಗಳು ಹಾಗೂ ಪಾರ್ಥೇನಿಯಂ ಕಳೆ, ರಾತ್ರಿ ವೇಳೆ ಮೂತ್ರ ಮಾಡುವವರ, ಕುಡುಕರ ತಾಣ...
– ಇದು ಇನ್ನೂ ಉದ್ಘಾಟನೆಯಾಗದ, ನೆಲಮಂಗಲ ತಾಲ್ಲೂಕಿನ ಸೋಂಪುರ ಉಪ ತಹಶೀಲ್ದಾರ್ ಕಾರ್ಯಾಲಯ ನೂತನ ಕಟ್ಟಡದ ದುಃಸ್ಥಿತಿ.
ದಶಕಗಳಿಂದ ಬಾಡಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಡಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕೆಂಬ ಉದ್ದೇಶದಿಂದ ಈ ಕಟ್ಟಡವನ್ನು ನಿರ್ಮಿಸಲಾಗಿದೆ.
ಸೋಂಪುರ ನಾಡ ಕಚೇರಿ ಆರಂಭವಾದಾಗಿನಿಂದ ದಾಬಸ್‌ಪೇಟೆ ಪೊಲೀಸ್ ಠಾಣೆ ಮುಂಭಾಗದ ಖಾಸಗಿ ಕಟ್ಟಡದಲ್ಲಿ ಬಾಡಿಗೆಯಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ.
‘ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಕಟ್ಟಡ ನಿರ್ಮಿಸಿ, ಈಗಲೂ ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಹಿಸಿದರೆ, ಸರ್ಕಾರದ ಹಣ ಪೋಲಾಗುವುದಿಲ್ಲವೆ’ ಎಂದು ವಕೀಲ ಮಾರುತಿ ಪ್ರಶ್ನಿಸುತ್ತಾರೆ.
‘ಸಾರ್ವಜನಿಕರ ತೆರಿಗೆ ಹಣದಿಂದ ಕಟ್ಟಿದ ಕಟ್ಟಡ ಕಸದ ತಾಣವಾಗಿದೆ‘ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ರಾಜೇಶ್ ಬೇಸರ ವ್ಯಕ್ತಪಡಿಸುತ್ತಾರೆ.
ಕಟ್ಟಡಕ್ಕೆ ಅಗತ್ಯವಾದ ವಿದ್ಯುತ್ ಶೌಚಾಲಯಕ್ಕೆ ನೀರಿನ ಸಂಪರ್ಕ ಇಲ್ಲದೆ ಇದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು ಶೀಘ್ರದಲ್ಲಿ ನೂತನ ಕಟ್ಟಡಕ್ಕೆ ನಾಡ ಕಚೇರಿ ಸ್ಥಳಾಂತರ ಮಾಡುತ್ತೇವೆ.
- ಶಶಿಧರ್ ಉಪ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.