ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿ ಅನುಸಾರ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಹಾಗೂ ದಲಿತ ಸಂಘರ್ಷ ಸಮಿತಿ ಆಗ್ರಹಿಸಿವೆ.
ಎರಡೂ ಸಂಘಟನೆಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಾಹಿತಿಗಳಾದ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ವಕೀಲರಾದ ಪ್ರೊ. ರವಿವರ್ಮ ಕುಮಾರ್, ಸಿ.ಎಸ್.ದ್ವಾರಕನಾಥ್, ಚಿಂತಕ ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಹಲವರು ಈ ಹಕ್ಕೊತ್ತಾಯವನ್ನು ಬೆಂಬಲಿಸಿ ಸಹಿ ಮಾಡಿದ್ದಾರೆ.
ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದ ಮುಖಂಡರು, ‘ಕಲಬುರಗಿಯಲ್ಲಿ ಮಂಗಳವಾರ (ಸೆಪ್ಟೆಂಬರ್ 17) ನಡೆಯುವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ಪಡೆದುಕೊಳ್ಳುವ ಮೂಲಕ ತಳ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಒಳಮೀಸಲಾತಿ ಜಾರಿಗೊಳ್ಳುವವರೆಗೂ ಕೆಪಿಎಸ್‌ಸಿ ಮೂಲಕವೂ ಸೇರಿದಂತೆ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬಾರದು. ಪ್ರಗತಿಯಲ್ಲಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು. ಮೂರು ತಿಂಗಳಲ್ಲಿ ಒಳ ಮೀಸಲಾತಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಸಂಚಾಲಕ ಬಸವರಾಜ ಕೌತಾಳ ಮಾತನಾಡಿ, ‘ಒಳ ಮೀಸಲಾತಿ ಜಾರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಬೇಕು’ ಎಂದರು.
ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಸಂವಿಧಾನ ಬದ್ಧವಾದ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಹಿಂದುಳಿದಿರುವಿಕೆಯ ಆಧಾರದಲ್ಲಿ ಒಳ ಮೀಸಲಾತಿ ನೀಡಿದರೆ ಈವರೆಗೆ ಮೀಸಲಾತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದ ಸಮುದಾಯಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.
ಮುಖಂಡ ಗೋಪಿನಾಥ್ ಮಾತನಾಡಿ, ‘ಹಲವು ದೇಶಗಳಲ್ಲಿ ಮಲದ ಗುಂಡಿ ಶುಚಿಗೆ ಯಂತ್ರಗಳನ್ನು ಬಳಸಲಾಗುತ್ತದೆ. ಆದರೆ, ಭಾರತದಲ್ಲಿ ಈಗಲೂ ಮಲದ ಗುಂಡಿಗೆ ಮನುಷ್ಯನನ್ನು ಇಳಿಸಿ ಶುಚಿ ಮಾಡಿಸುವ ಕೆಲಸ ನಡೆಯುತ್ತಿದೆ. ಒಳ ಮೀಸಲಾತಿಗೆ ಬಿಎಸ್‌ಪಿ ನಾಯಕಿ ಮಾಯಾವತಿ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಪಕ್ಷ ಬಿಟ್ಟು ಬಂದಿದ್ದೇನೆ’ ಎಂದು ಹೇಳಿದರು.
ಸಭೆಯಲ್ಲಿ ಚಿಂತಕ ಶಿವಸುಂದರ್, ದಲಿತ ಮುಖಂಡರಾದ ಮಾರಸಂದ್ರ ಮುನಿಯಪ್ಪ, ಹೆಣ್ಣೂರು ಶ್ರೀನಿವಾಸ್, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ ನೂರೊಂದು ಉಪ ಜಾತಿಗಳಿವೆ. ಸುಪ್ರೀಂ ಕೋರ್ಟ್ ಆದೇಶ ಬಂದು ಒಂದು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರವು ಆದೇಶವನ್ನು ಅನುಷ್ಠಾನಗೊಳಿಸಿಲ್ಲ.- ಪಿಚ್ಚಳ್ಳಿ, ಶ್ರೀನಿವಾಸ್ ಗಾಯಕ
ಪರಿಶಿಷ್ಟ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳಿಗೆ ಮೀಸಲಿಟ್ಟಿದ್ದ ₹ 26 ಸಾವಿರ ಕೋಟಿ ಅನುದಾನವನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ಮೋಸ ಮಾಡಿದ್ದಾರೆ.-ಆರ್. ಮೋಹನರಾಜ್ ದಸಂಸ, ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.