ADVERTISEMENT

ಕ್ರೌರ್ಯಕಾಂಡ:ರೇಣುಕಸ್ವಾಮಿ ಮರ್ಮಾಂಗಕ್ಕೆ ನಟ ದರ್ಶನ್ ಒದ್ದಿದ್ದು ತನಿಖೆಯಲ್ಲಿ ದೃಢ

ಆದಿತ್ಯ ಕೆ.ಎ
Published 5 ಸೆಪ್ಟೆಂಬರ್ 2024, 23:53 IST
Last Updated 5 ಸೆಪ್ಟೆಂಬರ್ 2024, 23:53 IST
<div class="paragraphs"><p>ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡಿದ್ದ ರೇಣುಕಸ್ವಾಮಿ&nbsp;</p></div>

ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡಿದ್ದ ರೇಣುಕಸ್ವಾಮಿ 

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಮೇಲೆ ಪಟ್ಟಣಗೆರೆಯ ಶೆಡ್‌ನಲ್ಲಿ ನಟ ದರ್ಶನ್, ಅವರ ಪ್ರೇಯಸಿ ಪವಿತ್ರಾಗೌಡ ಸೇರಿ 14 ಆರೋಪಿಗಳು ನಡೆಸಿದ ಕ್ರೌರ್ಯ ಹಾಗೂ ಚಿತ್ರಹಿಂಸೆಗೆ ಹಲವು ಸಾಕ್ಷ್ಯ ಕಲೆ ಹಾಕಿರುವ ತನಿಖಾ ತಂಡ, ಅವುಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

‘ತಪ್ಪಾಗಿದೆ, ಒಮ್ಮೆ ಬದುಕಲು ಅವಕಾಶ ಕೊಡಿ...’ ಎಂದು ಕೈಮುಗಿದು ಪರಿಪರಿಯಾಗಿ ರೇಣುಕಸ್ವಾಮಿ ಬೇಡಿಕೊಂಡರೂ ಮನಸೋಇಚ್ಛೆ ಹಲ್ಲೆ ನಡೆಸಿ ಹತ್ಯೆ ಮಾಡಿರುವುದಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್‌) ತಜ್ಞರ ದತ್ತಾಂಶ ಸಂಗ್ರಹದಿಂದ ತನಿಖಾಧಿಕಾರಿಗಳಿಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ರೇಣುಕಸ್ವಾಮಿ ಅಂತಿಮ ಕ್ಷಣದ ಫೋಟೊಗಳು ಘಟನೆಯ ಭೀಕರತೆಯನ್ನು ಕಟ್ಟಿಕೊಡುತ್ತವೆ.

ADVERTISEMENT

ಎಲ್ಲ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಪೊಲೀಸರು ದೋಷಾರೋಪ ಪಟ್ಟಿಯೊಂದಿಗೆ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ದತ್ತಾಂಶದ ಮರು ಸಂಗ್ರಹ, ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳಿಂದ ಪಡೆಯಲಾದ 9 ಫೋಟೊಗಳು ದರ್ಶನ್‌ ಮತ್ತು ಸಹಚರರ ಕೃತ್ಯಕ್ಕೆ ಪ್ರಬಲ ಸಾಕ್ಷ್ಯ ಒದಗಿಸಿವೆ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ಆರೋಪಿಗಳ ಎದುರು ರೇಣುಕಸ್ವಾಮಿ ಕೈಮುಗಿದು ಬೇಡಿಕೊಂಡಿದ್ದು, ಹಲ್ಲೆಯ ಬಳಿಕ ಪ್ರಜ್ಞೆತಪ್ಪಿ ನೆಲದ ಮೇಲೆ ಅಂಗಾತ ಬಿದ್ದಿದ್ದು, ಬಿಳಿ ಬಣ್ಣದ ಸ್ಕಾರ್ಪಿಯೊ ವಾಹನದಲ್ಲಿ ಮೃತದೇಹ ಸಾಗಣೆ ಮಾಡಿದ್ದ ಫೋಟೊಗಳು ಲಭಿಸಿವೆ. ಜತೆಗೆ, ರೇಣುಕಸ್ವಾಮಿ ಮೇಲೆ ಹಲ್ಲೆಗೆ ಬಳಸಿದ್ದ ಶೆಡ್‌ನ ಸೆಕ್ಯೂರಿಟಿ ಗಾರ್ಡ್‌ನ ಲಾಠಿ, ಕಟ್ಟಿಹಾಕಲು ಬಳಸಿದ್ದ ಹಗ್ಗದ ತುಂಡು, ಎಲೆಕ್ಟ್ರಿಕ್‌ ಶಾಕ್‌ ನೀಡಲು ಉಪಯೋಗಿಸಿದ್ದ ಮೆಗ್ಗರ್‌ ಸಾಧನವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ತೀವ್ರ ಸ್ವರೂಪದ ಹಲ್ಲೆ ಮತ್ತು ವಿದ್ಯುತ್‌ ಆಘಾತದಿಂದ ಸಾವು ಸಂಭವಿಸಿದೆ ಎಂಬುದಕ್ಕೆ ಪುರಾವೆ ಲಭಿಸಿದೆ ಎಂದು ತನಿಖಾ ತಂಡ ಆರೋಪಪಟ್ಟಿಯಲ್ಲಿ ಹೇಳಿದೆ.

ಪವಿತ್ರಾಗೌಡ ಅವರ ವ್ಯವಸ್ಥಾಪಕ ಕೆ.ಪವನ್‌ ಸೂಚನೆಯಂತೆ ಜೂನ್‌ 8ರಂದು ಮಧ್ಯಾಹ್ನ 2.30ರಿಂದ 3 ಗಂಟೆಯ ಸುಮಾರಿಗೆ ಪಟ್ಟಣಗೆರೆಯ ಶೆಡ್‌ಗೆ ರೇಣುಕಸ್ವಾಮಿ ಅವರನ್ನು ರಾಘವೇಂದ್ರ ನೇತೃತ್ವದ ತಂಡವು ಕರೆತಂದಿತ್ತು. ಅದೇ ವೇಳೆಯಲ್ಲಿ ದರ್ಶನ್‌, ವಿನಯ್‌, ನಟ ಚಿಕ್ಕಣ್ಣ, ನಾಗರಾಜ್‌, ಪ್ರದೂಷ್‌ ಅವರು ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ನಡೆಸುತ್ತಿದ್ದರು. ಆಗ ಪವನ್‌, ರೇಣುಕಸ್ವಾಮಿ ಫೋಟೊ ತೆಗೆದು ಪ್ರದೂಷ್ ಮೊಬೈಲ್‌ಗೆ ಕಳುಹಿಸಿದ್ದರು. ‘ಯಾರನ್ನೋ ಕರೆತಂದು ಹಲ್ಲೆ ನಡೆಸುತ್ತಿರುವುದಾಗಿ’ ಹೇಳಿ ಸೆಕ್ಯೂರಿಟಿ ಗಾರ್ಡ್‌ ಸಹ ಶೆಡ್‌ನ ಮಾಲೀಕರ ಸಂಬಂಧಿಯೂ ಆಗಿರುವ ವಿನಯ್‌ಗೆ ಮತ್ತೊಂದು ಫೋಟೊ ಕಳುಹಿಸಿದ್ದರು. ರೇಣುಕಸ್ವಾಮಿ ಮೃತಪಟ್ಟ ನಂತರ ಆರೋಪಿಗಳು ಈ ಫೋಟೊಗಳನ್ನು ಅಳಿಸಿ ಹಾಕಿ ಸಾಕ್ಷ್ಯನಾಶ ಪಡಿಸಿದ್ದರು. ಆ ಫೋಟೊಗಳನ್ನು ಎಸ್‌ಎಫ್‌ಎಲ್ ತಜ್ಞರು ಮರು ಸಂಗ್ರಹಿಸಿದ್ದಾರೆ.

‘ಪವಿತ್ರಾಗೌಡ ಚಪ್ಪಲಿಯಿಂದ ಹಲ್ಲೆ ನಡೆಸಿದರೆ, ದರ್ಶನ್‌ ರೇಣುಕಸ್ವಾಮಿ ಮರ್ಮಾಂಗಕ್ಕೆ ಒದೆಯುತ್ತಾರೆ. ‘ನನ್ನ ಆಪ್ತೆಯ ಮೇಲೆ ಕಣ್ಣು ಹಾಕುತ್ತೀಯಾ. ಎಷ್ಟೋ ಧೈರ್ಯ ನಿನಗೆ’ ಎಂದು ಕೆರಳುತ್ತಾರೆ. ಆಗ, ರೇಣುಕಸ್ವಾಮಿ ಜೀವದಾನಕ್ಕೆ ಮೊರೆ ಇಡುತ್ತಾರೆ. ಮನೆಯಲ್ಲಿ ವಯಸ್ಸಾದ ಪೋಷಕರು, ಗರ್ಭಿಣಿ ಪತ್ನಿ ಇದ್ದಾಳೆ ಎಂಬುದಾಗಿ ಮನವರಿಕೆಗೆ ಪ್ರಯತ್ನಿಸುತ್ತಾರೆ. ಆದರೂ, ಆರೋಪಿಗಳ ಮನಸ್ಸು ಬದಲಾಗುವುದಿಲ್ಲ. ಹಗ್ಗದಿಂದ ಬಿಗಿದು ಲಾಠಿ ಮುರಿಯುವ ತನಕ ಅಮಾನುಷವಾಗಿ ಹಲ್ಲೆ ನಡೆಸುತ್ತಾರೆ. ಕಣ್ಣಿನ ಗುಡ್ಡೆಗೂ ಹೊಡೆಯುತ್ತಾರೆ. ರೇಣುಕಸ್ವಾಮಿ ಎದೆಯ ಮೇಲೆ ದರ್ಶನ್‌ ಕಾಲಿಡುತ್ತಾರೆ. ಧನರಾಜ್‌ ಎಲೆಕ್ಟ್ರಿಕ್‌ ಶಾಕ್‌ ನೀಡುತ್ತಾರೆ. ಅದಾದ ಮೇಲೆ ರೇಣುಕಸ್ವಾಮಿ ನರಳಿನರಳಿ ಮೃತಪಡುತ್ತಾರೆ’ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

‘ರೇಣುಕಸ್ವಾಮಿ ಮೃತಪಟ್ಟ ನಂತರ ದರ್ಶನ್‌ ಅವರೇ ಮೃತದೇಹದ ವಿಲೇವಾರಿಗೆ ಸೂಚಿಸುತ್ತಾರೆ. ಅದರಂತೆ ಪ್ರದೂಷ್‌ ಹಾಗೂ ವಿನಯ್‌ ಸೇರಿಕೊಂಡು, ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಅನ್ಯ ವ್ಯಕ್ತಿಗಳು ಪೊಲೀಸರ ಎದುರು ಶರಣಾಗುವಂತೆ ಮಾಡಲು ಸಂಚು ರೂಪಿಸುತ್ತಾರೆ. ಸ್ಥಳದಲ್ಲಿದ್ದ ಚಿತ್ರದುರ್ಗ ರಾಘವೇಂದ್ರ ಹಾಗೂ ವಿನಯ್‌ ಮತ್ತು ಪ್ರದೂಷ್ ಕರೆಸಿದ ಇತರ ಮೂವರನ್ನು ಹಣದ ಆಮಿಷವೊಡ್ಡಿ ಶರಣಾಗತಿ ಮಾಡಿಸಲಾಗುತ್ತದೆ. ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿರುವುದಾಗಿ ಅವರು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಶರಣಾಗುವ ಸಮಯದಲ್ಲಿ ಅವರು ಹೇಳಿಕೆ ನೀಡಿದ್ದರು’ ಎಂದು ಮೂಲಗಳು ಹೇಳಿವೆ.

ಕಾರಿನಲ್ಲಿ ಕರೆತಂದಿದ್ದರು: ಜೂನ್ 8ರಂದು ಬೆಳಿಗ್ಗೆ ಚಿತ್ರದುರ್ಗದಲ್ಲಿ ತನ್ನ ತಂಗಿಯ ಸ್ಕೂಟಿಯಲ್ಲಿ ರೇಣುಕಸ್ವಾಮಿ ತೆರಳುತ್ತಿದ್ದರು. ಆಗ ಕರೆ ಮಾಡಿದ್ದ ರಾಘವೇಂದ್ರ ಅವರು ದರ್ಶನ್‌ ಭೇಟಿ ಮಾಡಿಸುವುದಾಗಿ ಹೇಳಿದ್ದರು. ಅದಕ್ಕೆ ಒಪ್ಪದೇ ಇದ್ದಾಗ ಅಪಹರಣ ಮಾಡಿದ್ದರು. ಅಪಹರಣ ನಡೆಸುವುದಕ್ಕೂ ನಾಲ್ಕು ದಿನ ಮೊದಲು ಪವಿತ್ರಾಗೌಡ ಅವರು ರೇಣುಕಸ್ವಾಮಿ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದರು. ಸಂದೇಶ ಕಳುಹಿಸದಂತೆ ಬೆದರಿಕೆ ಹಾಕಿದ್ದರು. ಅದಾದ ಬಳಿಕ ಪವನ್, ಪವಿತ್ರಾ ಹೆಸರಿನಲ್ಲಿ ಸಂದೇಶ ಕಳುಹಿಸಿ ರೇಣುಕಸ್ವಾಮಿಯ ವಿಳಾಸ ಪತ್ತೆಹಚ್ಚಿರುತ್ತಾರೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜೀವದಾನ ನೀಡುವಂತೆ ಬೇಡಿದ್ದ ರೇಣುಕಸ್ವಾಮಿ

‘ದರ್ಶನ್‌–ಪವಿತ್ರಾ ಸಹ ಜೀವನ’

‘ವಿಚಾರಣೆ ವೇಳೆ ಪವಿತ್ರಾ–ದರ್ಶನ್‌ ಅವರಿಗೆ ಹಲವು ಪ್ರಶ್ನೆ ಕೇಳಲಾಗಿತ್ತು. ರೇಣುಕಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದನ್ನು ದರ್ಶನ್‌ ಅವರಿಗೆ ಹೇಳಲು ಕಾರಣ ಏನು ಎಂದು ಕೇಳಲಾಗಿತ್ತು. ಆಗ ತಾವಿಬ್ಬರೂ ಸಹ ಜೀವನ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಕೆಲವು ದಾಖಲೆಗಳೂ ದೊರಕಿವೆ’ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ದತ್ತಾಂಶ ಮರುಸಂಗ್ರಹಕ್ಕೆ ಯತ್ನ

‘ದರ್ಶನ್‌ ಹಾಗೂ ಪವಿತ್ರಾಗೌಡ ಅವರ ಮೊಬೈಲ್‌ನಲ್ಲಿ ಕೆಲವು ಫೋಟೊ ಹಾಗೂ ವಿಡಿಯೊಗಳಿದ್ದವು. ಅವರಿಬ್ಬರ ಐ–ಫೋನ್‌ಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು. ಆದರೂ ದತ್ತಾಂಶ ಮರು ಸಂಗ್ರಹವಾಗಿಲ್ಲ. ಈ ಎರಡೂ ಮೊಬೈಲ್‌ಗಳನ್ನು ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಗುಜರಾತ್‌ನ ಎಫ್‌ಎಸ್‌ಎಲ್‌ ವಿಶ್ವವಿದ್ಯಾಲಯಕ್ಕೆ ರವಾನಿಸಲು ಚಿಂತನೆ ನಡೆಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೇಗೆ ಸಾವಾಯಿತು?

ವೈದ್ಯರ ವರದಿ ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಸ್ವಾಮಿಯ ವೃಷಣಗಳಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿರುವುದು ದೃಢವಾಗಿದೆ. ಅಲ್ಲದೇ ವೃಷಣಗಳ ಮೇಲೆ ಮೇಲೆ ಕಾಲಿನಿಂದ ತುಳಿದು ಹಾನಿಗೊಳಿಸಿರುವುದು ಪತ್ತೆಯಾಗಿದೆ. ಹೀಗಾಗಿ ಅವುಗಳ ಮೇಲಿನ ಚರ್ಮ ಕಿತ್ತು ಬಂದಿದೆ. ಅಲ್ಲದೆ ಆತನ ಎದೆ ಹೊಟ್ಟೆ ಬೆನ್ನು ತಲೆಯ ಭಾಗಕ್ಕೆ ಕೈ ಕಾಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ ಪರಿಣಾಮ ಆಂತರಿಕ ಮತ್ತು ಬಾಹ್ಯವಾಗಿ ತೀವ್ರ ರಕ್ತಸ್ರಾವವಾಗಿ ರೇಣುಕಸ್ವಾಮಿ ಮೃತಪಟ್ಟಿದ್ದಾರೆ. ಪಕ್ಕೆಲುಬು ಮುರಿದು ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ. ಎದೆಗೂಡಿನ ಮೂಳೆ ಮುರಿತವಾಗಿದೆ ಎಂದು ವೈದ್ಯರು ನೀಡಿದ ವರದಿಯಲ್ಲಿದೆ. ರೇಣುಕಸ್ವಾಮಿ ದೇಹದ 39 ಕಡೆಗಳಲ್ಲಿ ತೀವ್ರ ಗಾಯಗಳಾಗಿವೆ ಎಂದು ದಾಖಲಿಸಲಾಗಿದೆ. ಅದನ್ನೇ ಆರೋಪ ಪಟ್ಟಿಯಲ್ಲೂ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.