ADVERTISEMENT

ಪೊಲೀಸರ ಕೈಸೇರಿದ ರೇಣುಕಸ್ವಾಮಿ ಮರಣೋತ್ತರ ಪರೀಕ್ಷಾ ವರದಿ

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ: ಐದು ತಾಸು ಚಿತ್ರಹಿಂಸೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:42 IST
Last Updated 19 ಜುಲೈ 2024, 15:42 IST
<div class="paragraphs"><p>ರೇಣುಕಸ್ವಾಮಿ</p></div>

ರೇಣುಕಸ್ವಾಮಿ

   

ಬೆಂಗಳೂರು: ಚಿತ್ರದುರ್ಗ ರೇಣಕಸ್ವಾಮಿ ಕೊಲೆ ಪ್ರಕರಣದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ತನಿಖಾಧಿಕಾರಿಗಳ ಕೈಸೇರಿದ್ದು ಕೊಲೆ ಹೇಗೆ ನಡೆದಿದೆ ಎಂಬ ವಿವರವನ್ನು ವೈದ್ಯಾಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯಾಧಿಕಾರಿಗಳಿಂದ ಪೊಲೀಸರು, ಅಂತಿಮ ವರದಿ ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

‘ನಾಲ್ಕರಿಂದ ಐದು ತಾಸು ಚಿತ್ರಹಿಂಸೆ ನೀಡಿ, ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಮಾರಕವಾಗಿ ಹೊಡೆದಿದ್ದರಿಂದಾಗಿ ನೋವು ತಡೆಯಲಾರದೇ ಹಂತ ಹಂತವಾಗಿ ಕೊನೆಯುಸಿರು ಎಳೆದಿದ್ದಾರೆ. ದೇಹದ ಹಲವು ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳು ಆಗಿವೆಯೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಬಲವಾದ ಹೊಡೆದಿದ್ದರಿಂದಾಗಿ ಹಲವು ಮೂಳೆಗಳು ಮುರಿದಿವೆ. ಜತೆಗೆ, ರಕ್ತಸ್ರಾವ ಆಗಿದೆ. ಕೃತ್ಯ ನಡೆದ ದಿನದಂದು ಸಂಜೆ 6.30ಯಿಂದ 7 ಗಂಟೆ ನಡುವೆ ಅವರು ಮೃತಪಟ್ಟಿದ್ದಾರೆ’ ಎಂದು ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ.

‘ಸ್ನೇಹಿತೆಯ ಪತಿ ಅಲ್ಲ’

‘ಪವಿತ್ರಾ ಗೆಳತಿಯ ಪತಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಅವರು ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಅಂದು ಅವರು ರಜೆಯಲ್ಲಿದ್ದರು. ಬದಲಿಗೆ ಮತ್ತೊಬ್ಬ ವೈದ್ಯಾಧಿಕಾರಿ ಈ ಪರೀಕ್ಷೆ ನಡೆಸಿದ್ದಾರೆ’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಾಕ್ಷಿದಾರರ ಮೊಬೈಲ್‌ ಸಹ ರವಾನೆ

ಆರೋಪಿಗಳ ಜತೆಗೆ ಸಾಕ್ಷಿದಾರರಿಂದಲೂ ಮೊಬೈಲ್‌ ಜಪ್ತಿ ಮಾಡಲಾಗಿದ್ದು ಎಲ್ಲ ಮೊಬೈಲ್‌ಗಳನ್ನೂ ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿ ಬಳಸುತ್ತಿದ್ದ ಇನ್‌ಸ್ಟಾಗ್ರಾಮ್‌ ಖಾತೆ ಹಾಗೂ ವಾಟ್ಸ್‌ಆ್ಯಪ್‌ನಲ್ಲಿದ್ದ ದತ್ತಾಂಶವನ್ನು ಸೆನ್‌ ಪೊಲೀಸ್‌ ಠಾಣೆ ತಜ್ಞರ ನೆರವಿನಿಂದ ಮರು ಪಡೆಯುವ ಕೆಲಸ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ, ನಟ ದರ್ಶನ್‌ ಮನೆಯಿಂದ ಜಪ್ತಿ ಮಾಡಿಕೊಂಡ ಸಿಸಿ ಟಿ.ವಿ ಕ್ಯಾಮೆರಾದ ಡಿವಿಆರ್‌ ಅನ್ನು ಸೈಬರ್ ತಜ್ಞರು ಪರಿಶೀಲಿಸಿ ದತ್ತಾಂಶ ಸಂಗ್ರಹಿಸಿಕೊಟ್ಟಿದ್ದಾರೆ. ದತ್ತಾಂಶದಲ್ಲಿ ತನಿಖೆಗೆ ಪೂರಕವಾದ ಅಂಶಗಳು ಲಭಿಸಿವೆ. ಅದರ ಅಸಲಿತನದ ಪರೀಕ್ಷೆಗೆ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕೆಲವು ವಾಹನಗಳು ಬೇರೆಯವರ ಹೆಸರಿನಲ್ಲಿದ್ದವು. ಆ ವಾಹನಗಳ ಮಾಲೀಕರನ್ನೂ ಕರೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ ಭೇಟಿ ಮಾಡಿದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್‌ ಅವರನ್ನು ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹಾಗೂ ನಿರ್ದೇಶಕ ತರುಣ್‌ ಸುಧೀರ್‌ ಶುಕ್ರವಾರ ಭೇಟಿ ಮಾಡಿ ಚರ್ಚಿಸಿದರು. ‘ದರ್ಶನ್ ನೋಡಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದೆ. ಜೈಲಾಧಿಕಾರಿಗಳು ನೀಡಿದ ಅನುಮತಿ ಮೇರೆಗೆ ಭೇಟಿ ಮಾಡಿದ್ದೇನೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಬಗ್ಗೆ ದರ್ಶನ್‌ ಕೇಳಿದರು. ನಾನೂ ಸಹ ಅವರ ಊಟ ಆರೋಗ್ಯ ಮತ್ತು ದಿನಚರಿಯ ಬಗ್ಗೆ ಕೇಳಿದೆ. ಕಾರಾಗೃಹದಲ್ಲಿ ಪುಸ್ತಕಗಳನ್ನು ಓದುತ್ತಿದ್ದಾರೆ. ನಾನೂ ಕೆಲವು ಪುಸ್ತಗಳನ್ನು ನೀಡಿದ್ದೇನೆ’ ಎಂದು ದರ್ಶನ್‌ ಪುಟ್ಟಣ್ಣಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕೃತ್ಯಕ್ಕೆ ಒಳಸಂಚು: ತನಿಖೆಯಿಂದ ದೃಢ

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳೂ ಸಮಾನ ಉದ್ದೇಶದಿಂದ ಕೃತ್ಯ ಎಸಗಲು ಒಳಸಂಚು ರೂಪಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಕೃತ್ಯ ನಡೆದ ನಂತರ ಆರೋಪಿಗಳು ಭೌತಿಕ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನು ನಾಶ ಪಡಿಸಿದ್ದಾರೆ. ಇನ್ನೂ ಕೆಲವು ಸಾಕ್ಷ್ಯಗಳನ್ನು ನಾಶ ಪಡಿಸಲು ಪ್ರಯತ್ನಿಸಿದ್ದಾರೆ ಎಂದೂ ಅರ್ಜಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.