ADVERTISEMENT

ಮನೆಯೂಟ ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ವಜಾ: 24ನೇ ಎಸಿಎಂಎಂ ಕೋರ್ಟ್ ಆದೇಶ

24ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:51 IST
Last Updated 25 ಜುಲೈ 2024, 14:51 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್ ಅವರು ಮನೆಯೂಟಕ್ಕೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 24ನೇ ಎಸಿಎಂಎಂ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಜೈಲೂಟದಿಂದ ಅಜೀರ್ಣ, ಅತಿಸಾರ ಉಂಟಾಗುತ್ತಿದೆ. ಹೀಗಾಗಿ, ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿ ಹೈಕೋರ್ಟ್‌ಗೆ ಕಳೆದ ವಾರ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ‘ದರ್ಶನ್ ಅವರು ತಮ್ಮ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಸಲ್ಲಿಸಲಿ’ ಎಂದು ಆದೇಶಿಸಿತ್ತು. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದು ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಲಾಗಿತ್ತು.

‘ಕರ್ನಾಟಕ ಬಂದಿಖಾನೆ ಕಾಯ್ದೆ–1963ರ ಕಲಂ 30ರ ಅಡಿ ವಿಚಾರಣಾಧೀನ ಕೈದಿ ಮನೆ ಊಟ, ಹಾಸಿಗೆ ಇತ್ಯಾದಿ ಪಡೆಯಲು ಅರ್ಹರಾಗಿರುತ್ತಾರೆ. ದರ್ಶನ್ ಅವರಿಗೆ ಸದ್ಯ ಜೈಲಿನ ಊಟದಿಂದ ಆರೋಗ್ಯದಲ್ಲಿ ವ್ಯತ್ಯಯವುಂಟಾಗಿದೆ. ಹಾಗಾಗಿ, ಅವರಿಗೆ ಮನೆ ಊಟ ಪಡೆಯಲು ನಿರ್ದೇಶಿಸಬೇಕು. ಕೈದಿಯು ತನಗೆ ಬೇಕಾದ ಊಟ ಪಡೆಯುವುದು ಆತನ ಮೂಲಭೂತ ಹಕ್ಕು’ ಎಂದು ದರ್ಶನ್‌ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ADVERTISEMENT

‘ಜೈಲಿನ ನಿಯಮಾವಳಿ ಪ್ರಕಾರ ಕೊಲೆ ಆರೋಪಿಗೆ ಮನೆಯೂಟ ತರಿಸಿಕೊಳ್ಳಲು ಅವಕಾಶ ಇಲ್ಲ. ದರ್ಶನ್ ಊಟದ ಬಗ್ಗೆ ಜೈಲಿನ ಅಧಿಕಾರಿಗಳು ವರದಿ ನೀಡಿದ್ದು, ಈ ಪ್ರಕಾರ ಮನೆಯೂಟ ಅವಶ್ಯಕತೆ ಕಾಣಿಸುತ್ತಿಲ್ಲ. ಮನೆಯೂಟ ಪೂರೈಕೆ ಸಂಬಂಧ ಸೂಕ್ತ ಪ್ರಮಾಣ ಪತ್ರಗಳಿಲ್ಲ. ಇದಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಪತ್ರಗಳೂ ಇಲ್ಲ. ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ಇಲ್ಲ’ ಎಂದು ನ್ಯಾಯಾಲಯ ಹೇಳಿದೆ.

ದರ್ಶನ್ ಭೇಟಿ ಮಾಡಿದ ಸಾಧು:

ಹಾಸ್ಯ ನಟ ಸಾಧು ಕೋಕಿಲ ಅವರು ಗುರುವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್‌ ಅವರನ್ನು ಭೇಟಿ ಮಾಡಿ, ಚರ್ಚಿಸಿದರು.

ನಂತರ ಮಾತನಾಡಿದ ಅವರು, ‘ಪುಸ್ತಕ ಓದುತ್ತಾ ದರ್ಶನ್‌ ಕಾಲ ಕಳೆಯುತ್ತಿದ್ದಾರೆ. ಅವರನ್ನು ಮಾತನಾಡಿಸಿ ನನಗೂ ನೆಮ್ಮದಿ ಸಿಕ್ಕಿದೆ. ಮೆಜೆಸ್ಟಿಕ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು. ಮಂಗಳವಾರ ದರ್ಶನ್‌ ಭೇಟಿಗೆ ಬಂದಿದ್ದ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.